ಬೆಂಗಳೂರು: ಲಾಕ್‍ಡೌನ್ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ಹೀಗಾಗಿ ಯಾರೂ ಊರು ಖಾಲಿ ಮಾಡಬಾರದು ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಜಗತ್ತಿನೆಲ್ಲಡೆ ಹರಡಿದೆ. ಎಲ್ಲರೂ ಕೊರೊನಾ ಜೊತೆಯಲ್ಲೇ ಬದುಕುವ ಸ್ಥಿತಿ ಬಂದಿದೆ. ಹೀಗಾಗಿ ಇದಕ್ಕೆ ಯಾರೂ ಭಯ ಪಡಬೇಕಿಲ್ಲ. ಲಾಕ್‍ಡೌನ್ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ಯಾರೂ ಊರು ಖಾಲಿ ಮಾಡಬಾರದು. ಕೊರೊನಾಗೆ ಹೆದರಿ ಓಡಿ ಹೋಬಾರದು, ಜಗತ್ತಿಲ್ಲಿ ಎಲ್ಲಿಯೂ ಈ ರೋಗ ಬಿಟ್ಟಿಲ್ಲ. ಎಲ್ಲೆಡೆ ವೈರಸ್ ಹರಡುತ್ತಿದೆ. ಹೀಗಾಗಿ ಓಡಿ ಹೋಗಿ ಎಲ್ಲಾದರೂ ತಪ್ಪಿಸಿಕೊಳ್ಳುತ್ತೇನೆ ಎನ್ನುವಂಥ ರೋಗ ಇದಲ್ಲ ಎಂದು ಕಾರಜೋಳ ತಿಳಿಸಿದ್ದಾರೆ.
ಸರ್ಕಾರದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು. ರೋಗದ ಲಕ್ಷಣ ಕಂಡುಬಂದಲ್ಲಿ ಎಲ್ಲರೂ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಪಡೆಯಬೇಕು. ಈ ಮೂಲಕ ಗುಣಮುಖರಾಗಬೇಕು ಎಂದರು.
ಜನರಿಂದ ಒತ್ತಡ ಬಂತು, ಹೀಗಾಗಿ ತಜ್ಞರ ಅಭಿಪ್ರಾಯ ಪಡೆದು ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಗೊಳಿಸಲಾಯಿತು. ಆದರೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹಾಗೂ ಗುಜರಾತ್ ನಿಂದ ಬಂದ ಅನೇಕರು ಕೊರೊನಾ ಹೊತ್ತು ತಂದರು. ಜನ ಸರ್ಕಾರದ ನಿಬಂಧನೆಗಳನ್ನು ಪಾಳಿಸಬೇಕು. ಗುಂಪಾಗಿ ಓಡಾಡುವುದು, ಮಾರ್ಕೆಟ್‍ನಲ್ಲಿ ಓಡಾಡುವುದು, ವಿವಾಹಗಳನ್ನು ಹಾಗೂ ಸಾರ್ವಜನಿಕ ಸಭೆಗಳನ್ನು ಮಾಡಿದ್ದರಿಂದ ಕೊರೊನಾ ಉಲ್ಬಣಗೊಂಡಿದೆ ಎಂದರು.