– ಭೌತಿಕವಾಗಿ ಶಾಲೆ ನಡೆಸದಿರಲು ನಿರ್ಧಾರ
– ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಬೆಡ್ ನಿಗದಿ
– ಬಸ್ ಪ್ರಯಾಣಿಕರ ಸಂಖ್ಯೆಗೂ ಶೀಘ್ರ ಮಿತಿ
– ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿಗಳ ಜೊತೆ ಸಿಎಸ್ ಸಭೆ
ಬೆಂಗಳೂರು: ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್‍ಡೌನ್ ಹಾಗೂ ನೈಟ್ ಕರ್ಫ್ಯೂ ವಿಧಿಸುತ್ತಿಲ್ಲ. ಶಾಲೆಗಳನ್ನು ಸಹ ಭೌತಿಕವಾಗಿ ನಡೆಸದಿರಲು ನಿರ್ಧರಿಸಲಾಗಿದೆ. ಲಾಕ್‍ಡೌನ್ ಇಲ್ಲದಿದ್ದರೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ನಿಯಂತ್ರಣ ಸಂಬಂಧ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿಗಳು ಸಭೆ ನಡೆಸಿದ್ದು, ರಾಜ್ಯದ ಪರವಾಗಿ ಸಿಎಸ್ ರವಿಕುಮಾರ್ ಭಾಗಿಯಾದರು. ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಪರಿಸ್ಥಿತಿ ಕುರಿತು ಸಿಎಸ್ ವಿವರಣೆ ನೀಡಿದ್ದು, ಕ್ಯಾಬಿನೆಟ್ ಕಾರ್ಯದರ್ಶಿಗಳ ಸಭೆ ಬಳಿಕ ವಿಕಾಸಸೌಧದಲ್ಲಿ ರಾಜ್ಯದ ಕಾರ್ಯದರ್ಶಿಗಳ ಜೊತೆ ಸಹ ಸಿಎಸ್ ಸಭೆ ನಡೆಸಿದರು. ಡಿಜಿಪಿ ಪ್ರವೀಣ್ ಸೂದ್, ಗೃಹ ಕಾರ್ಯದರ್ಶಿಗಳು ಮತ್ತು ಕೊರೊನಾಗೆ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಿದ್ದರು.
ಬಳಿಕ ಸಿಎಸ್ ರವಿಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಕೊರೊನಾ ಹೆಚ್ಚಳದ ಬಗ್ಗೆ ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ, ಪಂಜಾಬ್‍ನಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕು ತಡೆಗೆ ನಿಗಾ ವಹಿಸಿ, ಲಸಿಕೆ ಹೆಚ್ಚಳಕ್ಕೆ ಸೂಚಿಸಿದ್ದಾರೆ. ಅಲ್ಲದೆ ಲಾಕ್‍ಡೌನ್, ನೈಟ್ ಕರ್ಫ್ಯೂ ಬಗ್ಗೆ ಯೋಚಿಸಬೇಡಿ. ಆದರೆ ನಿಯಮಗಳ ಬಿಗಿ ಪಾಲನೆಗೆ ಸೂಚಿಸಿದರು ಎಂದು ತಿಳಿಸಿದ್ದಾರೆ ಎಂದರು.
ಜನ ಹೆಚ್ಚು ಇರುವ ಕಡೆ ಲಸಿಕೆ ಹಾಕಲು ನಿರ್ಧರಿಸಿದ್ದು, ಕೈಗಾರಿಕೆ, ಐಟಿ ಸಂಸ್ಥೆಗಳಿಗೆ ಹೋಗಿ ಲಸಿಕೆ ಹಾಕಿಸಲು ಕ್ರಮ ವಹಿಸಲಾಗಿದೆ. ಈಗಾಗಲೇ ಜಾತ್ರೆ, ಧಾರ್ಮಿಕ ಉತ್ಸವಗಳನ್ನು ನಿಯಂತ್ರಿಸಿದ್ದೇವೆ. ಶಾಲೆಗಳನ್ನು ಭೌತಿಕವಾಗಿ ನಡೆಸೋದು ಬೇಡ ಎಂದೂ ನಿರ್ಧರಿಸಲಾಗಿದೆ. ಈಗಾಗಲೇ 6-9 ತರಗತಿಗಳನ್ನು ಹದಿನೈದು ದಿನ ಬಂದ್ ಮಾಡಲಾಗಿದೆ ಎಂದರು.
ಬೆಂಗಳೂರು, ಮೈಸೂರು, ಕಲಬುರ್ಗಿ, ಬೀದರ್ ಸೇರಿ ಹಲವು ಕಡೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಬೆಡ್ ನಿಗದಿ ಮಾಡಲು ನಿರ್ಧರಿಸಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ, ನಿಯಮಗಳ ಬಿಗಿ ಪಾಲನೆಗೆ ಸೂಚಿಸಿದ್ದಾರೆ. ಅಲ್ಲದೆ ಲಸಿಕೆ ಹೆಚ್ಚಿಸಲು ಸೂಚನೆ ನೀಡಿದ್ದು, ಲಸಿಕೆ ಹಾಕಿಸಿಕೊಳ್ಳಲು ಈಗ ಹೆಚ್ಚು ಜನ ಬರುತ್ತಿಲ್ಲ. ನಾವೇ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಸ್ಥಿತಿ ಇದೆ. ಹೀಗಾಗಿ ಹೆಚ್ಚು ಜನ ಇರುವ ಕಡೆ ಲಸಿಕೆ ಹಾಕಲು ಕ್ರಮ ತೆಗೆದುಕೊಳ್ಳುತ್ತೇವೆ.
ಕೇಂದ್ರಕ್ಕೆ ವಾಸ್ತವ ಸ್ಥಿತಿ ವರದಿ
ರಾಜ್ಯದಿಂದ ಕೇಂದ್ರಕ್ಕೆ ಕೊರೊನಾ ವಾಸ್ತವ ಸ್ಥಿತಿ ವರದಿಯನ್ನು ಸಲ್ಲಿಸಲಾಗಿದ್ದು, ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾಗೆ ಸಿಎಸ್ ರವಿಕುಮಾರ್ ಮಾಹಿತಿ ನೀಡಿದ್ದಾರೆ. ಕೊರೊನಾ ಪೀಡಿತರ ಸಂಖ್ಯೆ, ಗುಣಮುಖರಾಗುವ ರೋಗಿಗಳ ಸರಾಸರಿ ವಿವರ ಸಲ್ಲಿಕೆಯಾಗಿದೆ. ನೆರೆಯ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ವಾಣಿಜ್ಯ ಚಟುವಟಿಕೆಗಳನ್ನು ರಾಜ್ಯದಲ್ಲಿ ನಿಯಂತ್ರಿಸುವ ಅಗತ್ಯ ಇಲ್ಲ ಎಂದು ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ಜನಸಂದಣಿಗೆ ಬ್ರೇಕ್ ಹಾಕಲೇಬೇಕಾದ ಅಗತ್ಯವಿದೆ. ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಧಾರ್ಮಿಕ ಆಚರಣೆಗಳನ್ನು ಸಂಪ್ರದಾಯಕ್ಕಷ್ಟೇ ಸೀಮಿತಗೊಳಿಸಿ ಆಚರಿಸಬೇಕಿದೆ. ಬೇರೆ ವಲಯಗಳ ನೌಕರರಿಗೆ ಡ್ಯೂಟಿ ಪಾಳಿಗಳನ್ನು ಸಹ ಗಮನಿಸಬೇಕಿದೆ ಎಂದು ವರದಿಯಲ್ಲಿ ಹೇಳಿದ್ದಾರೆ.
ಸಮೂಹ ಸಾರಿಗೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಗೂ ಮಿತಿ ಹಾಕಬೇಕಿದ್ದು, ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮಗಳ ಅಗತ್ಯವಿದೆ. ಲಸಿಕೆ ಅಭಿಯಾನವನ್ನು ಇನ್ನೂ ಚುರುಕುಗೊಳಿಸಬೇಕು. ಲಸಿಕೆ ಹಾಕಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಎಲ್ಲ ಜಾಗೃತಿ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿಗೆ ಸಿಎಸ್ ರವಿಕುಮಾರ್ ವಿವರಿಸಿದ್ದಾರೆ.