ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 189 ಜನ ಸಿಬ್ಬಂದಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಲಾಕ್‍ಡೌನ್ ನಿಂದಾಗಿ ನಿರೀಕ್ಷಿತ ಆದಾಯ ಬರದಿರುವುದರಿಂದ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಸೋಹ ವಿಭಾಗ, ಸ್ವಚ್ಛತೆ, ಲಾಡು ತಯಾರಿಕಾ ವಿಭಾಗ, ಸೆಕ್ಯೂರಿಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ 189 ನೌಕರರನ್ನು ಜೂನ್ 4 ರಿಂದಲೇ ಪೂರ್ವಾನ್ವಯವಾಗುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಆದೇಶಿಸಿದ್ದಾರೆ.
ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶ, ವಿವಿಧ ಸೇವೆಗಳಿಗೆ ಆಗಿಂದಾಗ್ಗೆ ನಿಷೇಧ ಹೇರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ದಾಸೋಹ ಸೇವೆಯೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿಲ್ಲದಿರುವುದರಿಂದ, ಲಾಡು ಮಾರಾಟ ಸಹ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿರುವುದರಿಂದ ಆದಾಯ ಕುಸಿದಿದೆ. ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆಯನ್ವಯ ದೇವಾಲಯದ ಆದಾಯದಲ್ಲಿ ಶೇ.35ರಷ್ಟು ಭಾಗವನ್ನು ಮಾತ್ರ ಬಳಸಿಕೊಳ್ಳಲು ಅವಕಾಶವಿದ್ದು, ಇದರಿಂದಾಗಿ ಖಾಯಂ ನೌಕರರಿಗೆ ಸಂಬಳ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ದೇವಾಲಯ ಸಂಪೂರ್ಣವಾಗಿ ತೆರೆಯುವ ವರೆಗೆ 189 ನೌಕರರನ್ನು ಸೇವೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಕೋವಿಡ್ ಕರ್ತವ್ಯಕ್ಕಾಗಿ ನಿಯೋಜಿಸಲ್ಪಟ್ಟಿದ್ದ ನೌಕರರ ಪೈಕಿ 26 ಮಂದಿ ಸೇವೆಗೆ ಹಾಜರಾಗಿರಲಿಲ್ಲ. ಇವರ ಸೇವೆಯನ್ನು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.