ರಾಯಚೂರು: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ ನಾಳೆಯಿಂದ ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುತ್ತಿದೆ. ಹೀಗಾಗಿ ಕುಡುಕರು ಮಳೆಯನ್ನೂ ಲೆಕ್ಕಿಸದೆ ಒಂದು ವಾರಕ್ಕಾಗುವಷ್ಟು ಮದ್ಯ ಖರೀದಿಸಲು ಸರತಿಯಲ್ಲಿ ನಿಂತಿದ್ದಾರೆ.
ಒಂದು ವಾರ ಮದ್ಯದಂಗಡಿಗಳು ಸಹ ಬಂದ್ ಆಗುವ ಹಿನ್ನೆಲೆ ಮದ್ಯ ಪ್ರೀಯರಿಗೆ ಕಷ್ಟವಾಗಿದ್ದು, ಮಳೆಯನ್ನೂ ಲೆಕ್ಕಿಸದೆ ಮದ್ಯದ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ನಗರದ ಗಂಜ್ ರಸ್ತೆಯ ಎಂಎಸ್‍ಐಎಲ್ ಸೇರಿ ಬಹುತೇಕ ಕಡೆ ಮದ್ಯಕ್ಕಾಗಿ ದೊಡ್ಡ ಕ್ಯೂ ನಿಂತಿದ್ದು, ಒಂದು ವಾರಕ್ಕಾಗುವಷ್ಟು ಮದ್ಯ ಖರೀದಿಯಲ್ಲಿ ಕುಡುಕರು ಫುಲ್ ಬ್ಯುಸಿಯಾಗಿದ್ದಾರೆ.
Advertisement
Advertisement
ನಾಳೆಯಿಂದ ರಾಯಚೂರು, ಸಿಂಧನೂರು ನಗರಗಳು ಸಂಪೂರ್ಣ ಬಂದ್ ಆಗಲಿದ್ದು, ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದ್ಯದಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ರಾಯಚೂರು ನಗರದಲ್ಲಿ ಸಂಜೆಯಿಂದ ಮಳೆ ಸುರಿಯುತ್ತಿದ್ದು, ರಸ್ತೆಯಲ್ಲಿ ನೀರು ಹರಿದು ವಾಹನ ಸವಾರರು ಪರದಾಡುವಂತಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದಾವುದನ್ನೂ ಲೆಕ್ಕಿಸದ ಕುಡುಕರು ಮಳೆಯಲ್ಲೆ ಮದ್ಯದ ಅಂಗಡಿಗಳ ಮುಂದೆ ಕ್ಯೂ ನಿಂತು ಮದ್ಯ ಕೊಳ್ಳುತ್ತಿದ್ದಾರೆ.