ಹೈದರಾಬಾದ್: ಕೊರೊನಾ ವೈರಸ್ ಎಂಬ ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಹೇರಲಾಗಿತ್ತು. ಆದರೆ ಈ ಲಾಕ್ ಡೌನ್ ನಿಂದಾಗಿ ಸ್ವಲ್ಪ ಮಟ್ಟಿಗೆ ಪ್ರಯೋಜನವಾದರೆ ಇನ್ನೂ ಕೆಲವರ ಬದುಕಿನಲ್ಲಿ ಕತ್ತಲು ಕವಿದಂತಾಗಿದೆ. ಹಾಗೆಯೇ ಆರ್ಥಿಕ ಸಮಸ್ಯೆಯನ್ನು ಎದುರಿಸಲಾಗಿದೆ 26 ವರ್ಷದ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಈ ಘಟನೆ ಹೈದರಾಬಾದ್ ನ ಪರಿಗಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಆರ್ಥಿಕವಾಗಿ ಸರಳ ಕುಟುಂಬ ಹಿಂದುಳಿದಿತ್ತು. ಇದೀಗ ಲಾಕ್ ಡೌನ್ ನಿಂದಾಗಿ ಹಣ ಇಲ್ಲದೆ ಕುಟುಂಬ ಕಂಗಾಲಾಗಿತ್ತು. ಇದರಿಂದ ನೊಂದ ಸರಳ ಸಾಯುವ ನಿರ್ಧಾರಕ್ಕೆ ಬಂದಿದ್ದು, ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Advertisement
Advertisement
ಸರಳ ಗೃಹಿಣಿಯಾಗಿದ್ದು, ಈಕೆಯ ಪತಿ ನರಸಿಂಹ ಕಾರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದಾಗಿ ಸರಳ ಪತಿ ಕೆಲಸವಿಲ್ಲದೆ ಮೆನೆಯಲ್ಲೇ ಇದ್ದನು. ಹೀಗಾಗಿ ಮಾಡಿದ್ದ ಸಾಲವನ್ನು ಹಿಂದಿರುಗಿಸಲು ಹಾಗೂ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸರಳ ಬಳಿಯಿದ್ದ 4 ತೊಲ ಚಿನ್ನವನ್ನು ಅಡ ಇಡಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಪರಿಗಿ ಎಸ್ ಐ ವೆಂಕಟೇಶ್ ತಿಳಿಸಿದ್ದಾರೆ.
Advertisement
ಶನಿವಾರ ರಾತ್ರಿ 10.30ರ ಸುಮಾರಿಗೆ ಊಟವಾದ ಬಳಿಕ ಸರಳ ಕುಟುಂಬ ಟಿವಿ ನೋಡುವಲ್ಲಿ ಬ್ಯುಸಿಯಾಗಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಸರಳ, ನೇರವಾಗಿ ಬಾತ್ ರೂಮಿಗೆ ತೆರಳಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
Advertisement
ತನ್ನ ಮೈಮೇಲೆ ಬೆಂಕಿ ಆವರಿಸುತ್ತಿದ್ದಂತೆಯೇ ಸರಳ ನೋವಿನಿಂದ ಕಿರುಚಿಕೊಂಡು ಕುಟುಂಬದ ಸದಸ್ಯರು ಕುಳಿತಿದ್ದಲ್ಲಿಗೆ ಓಡಿಬಂದಿದ್ದಾಳೆ. ಈ ವೇಳೆ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಕೂಡಲೇ ನೆರೆಹೊರೆಯವರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆಕೆಯ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕುಟಂಬದವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.