ಶಿವಮೊಗ್ಗ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿ ವಿವಾಹವನ್ನು ಮುಂದೂಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿ ಲಾವಣ್ಯ ಅವರ ವಿವಾಹ ಹೈದರಾಬಾದ್ ಮೂಲದ ಡಾ. ವಿಕ್ರಮಾಧಿತ್ಯ ಅಥೆಲಿ ಅವರೊಂದಿಗೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿಗದಿಯಾಗಿತ್ತು. ಅಲ್ಲದೇ ಜೂನ್ 4 ರಂದು ಸೊರಬದ ಎಸ್.ಬಂಗಾರಪ್ಪ ಕ್ರೀಡಾಂಗಣದಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಸಹ ನಿಯೋಜಿಸಲಾಗಿತ್ತು.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗೂ ಸೋಂಕು ಹೆಚ್ಚುತ್ತಿರುವ ಕಾರಣ ಜೊತೆಗೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿರುವ ಜನರಿಗೆ ಮಿತಿ ಹೇರಿರುವುದರಿಂದ ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಪುತ್ರಿಯ ವಿವಾಹವನ್ನು ಮುಂದೂಡಿದ್ದಾರೆ. ಅಲ್ಲದೇ ಲಾಕ್ ಡೌನ್ ಮುಗಿದ ನಂತರ ಹಾಗೂ ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಮದುವೆ ದಿನಾಂಕ ನಿಗದಿಪಡಿಸುವ ಬಗ್ಗೆ ನಿರ್ಧರಿಸಿದ್ದಾರೆ.
ರಾಜ್ಯ ಸರಕಾರ ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಜಾರಿಗೊಳಿಸಿದೆ. ಮದುವೆ ಸಮಾರಂಭಗಳಲ್ಲಿ ಕೇವಲ 40 ಮಂದಿ ಮಾತ್ರ ಭಾಗವಹಿಸುವಂತೆ ಮಿತಿ ಹೇರಿದೆ.