ಲಾಕ್‍ಡೌನ್‍ನಿಂದ ಮರಳಿದ್ದ ಕೂಲಿಕಾರರಿಗೆ ರಾಯಚೂರಿನಲ್ಲಿ ಕೈ ತುಂಬಾ ಕೆಲಸ

Public TV
2 Min Read
Yaragera

ರಾಯಚೂರು: ಒಂದೋ ಬರಗಾಲ ಇಲ್ಲ ಅತೀವೃಷ್ಠಿ ಇದು ರಾಯಚೂರು ಜಿಲ್ಲೆಯ ಜನರಿಗೆ ತಟ್ಟಿರೋ ಶಾಪ. ಹೀಗಾಗಿ ಬಿಸಿಲನಾಡಿನ ಗ್ರಾಮೀಣ ಭಾಗದ ಜನ ಪ್ರತೀ ವರ್ಷ ಗುಳೆ ಹೋಗುವುದು ಸರ್ವೆ ಸಾಮಾನ್ಯ. ಆದ್ರೆ ಕೊರೊನಾ ಲಾಕ್‍ಡೌನ್‍ನಿಂದ ಸ್ವಗ್ರಾಮಗಳಿಗೆ ಮರಳಿದ್ದ ಜನ ನಿರುದ್ಯೋಗಿಗಳಾಗಿರಬಾರದು ಅಂತ ರಾಯಚೂರು ತಾಲೂಕಿನ ಯರಗೇರಾ ಗ್ರಾಮ ಪಂಚಾಯ್ತಿ ಎಲ್ಲರಿಗೂ ಕೆಲಸ ನೀಡಿ ಮಾದರಿಯಾಗಿದೆ.

Yaragera 1

ಪ್ರತೀ ವರ್ಷ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಜನ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಸೇರಿದಂತೆ ಇತರೆ ಮಹಾನಗರಗಳಿಗೆ ಗುಳೆ ಹೋಗುತ್ತಾರೆ. ಆದ್ರೆ ಈ ವರ್ಷ ಕೊರೊನಾ ಲಾಕ್‍ಡೌನ್ ನಿಂದಾಗಿ ಗುಳೆಹೋದ ಜನರೆಲ್ಲಾ ಗ್ರಾಮಕ್ಕೆ ಮರಳಿದ್ದರು. ಇದರಲ್ಲಿ ಬಹುತೇಕರು ಕೆಲಸವೇ ಇಲ್ಲದೆ ಪರದಾಡಿದರು, ಕೆಲವರು ಕೃಷಿಗೆ ಮರಳಿದರು. ಸರ್ಕಾರವೇನೋ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಗುಳೆ ಹೋಗಿ ಮರಳಿದ ಎಲ್ಲರಿಗೂ ಕೆಲಸ ಕೊಡಬೇಕು ಅಂತ ಜಿಲ್ಲೆಗಳಿಗೆ ಸೂಚಿಸಿತ್ತು. ಎಷ್ಟು ಜಿಲ್ಲೆಗಳು ಇದನ್ನ ಸಮರ್ಪಕವಾಗಿ ಪಾಲಿಸಿದವೋ ಗೊತ್ತಿಲ್ಲ. ಆದ್ರೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮ ಪಂಚಾಯತಿ ಮಾತ್ರ ಎಲ್ಲಾ ಕೂಲಿಕಾರರಿಗೆ ಕೆಲಸ ಕೊಟ್ಟಿದೆ. ಲಾಕ್‍ಡೌನ್ ಬಳಿಕ ಪುನಃ ಗುಳೆ ಹೋಗದಂತೆ ಪಂಚಾಯತಿ ವ್ಯಾಪ್ತಿಯ ಕೂಲಿಕಾರರನ್ನ ತಡೆಹಿಡಿದಿದೆ.

Yaragera 7

ಕೂಲಿಕಾರರಿಗೆ ಕೆಲಸ ಕೊಡಬೇಕು ಅಂತಲೇ 1 ಕೋಟಿ 27 ಲಕ್ಷ ರೂಪಾಯಿ ಜಿಲ್ಲಾ ಪಂಚಾಯತಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಸುಮಾರು 22 ಸಾವಿರ ಮಾನವ ದಿನಗಳ ಸೃಷ್ಠಿ ಮಾಡಿ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಕೆರೆ ಹೂಳು, ಗ್ರಾಮಪಂಚಾಯ್ತಿ ಕಟ್ಟಡ ನಿರ್ಮಾಣ, ಗೋದಾಮು ಕಟ್ಟಡ, ಐದು ಅಂಗನವಾಡಿ ಕೇಂದ್ರಗಳ ನಿರ್ಮಾಣ, ಕಲ್ಯಾಣಿ ಅಭಿವೃದ್ಧಿ, ಬಿಸಿಯೂಟ ಕೋಣೆಗಳನ್ನ ನಿರ್ಮಿಸಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಸಹಕಾರದಿಂದ ಪುನಃ ಗುಳೆ ಹೋಗುವವರು ಸಹ ಬಹುತೇಕರು ಗ್ರಾಮದಲ್ಲೇ ಉಳಿದಿದ್ದಾರೆ.

Yaragera 4

ಒಟ್ನಲ್ಲಿ ಗ್ರಾಮದಲ್ಲಿ ಕೃಷಿಯನ್ನ ನಂಬಿ ಬದುಕಲು ಸಾಧ್ಯವಿಲ್ಲ ಅಂತ ನಗರ ಪ್ರದೇಶಗಳಿಗೆ ಗುಳೆ ಹೋದ ಜನ ಲಾಕ್‍ಡೌನ್ ನಿಂದ ತತ್ತರಿಸಿ ಹೋಗಿದ್ದರು. ಕೆಲಸವಿಲ್ಲದೆ ಮರಳಿದ್ದ ಕೂಲಿಕಾರರಿಗಾಗಿ ವಿವಿಧ ಕಾಮಗಾರಿ ಕೈಗೆತ್ತಿಕೊಂಡು ಕೆಲಸ ನೀಡಿದ ಯರಗೇರಾ ಗ್ರಾಮ ಪಂಚಾಯತಿ ಭೇಷ್ ಎನಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *