– ಮಾದರಿ ಮಂಗಳಮುಖಿಯ ನೈಜ ಕಥೆ
ಮಂಗಳಮುಖಿಯರನ್ನ ನೋಡುವ ದೃಷ್ಟಿಕೋನ ಸಮಾಜದಲ್ಲಿ ಬದಲಾಗಬೇಕಿದೆ. ಕೇವಲ ಭಿಕ್ಷಾಟನೆಗೆ ಮಾಡದೇ ಹಲವು ಮಂಗಳಮುಖಿಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಎಷ್ಟೋ ಜನರ ಉದ್ಯೋಗವನ್ನ ಲಾಕ್‍ಡೌನ್ ನುಂಗಿ ಸ್ವಾಹಃ ಮಾಡಿತ್ತು. ಆದ್ರೆ ಗುಜರಾತಿನ ಸ್ವಾವಲಂಬಿ ಮಂಗಳಮುಖಿ ದೃತಿಗೆಡದೇ ತಮ್ಮದೇ ಬ್ಯುಸಿನೆಸ್ ಆರಂಭಿಸಿ ತಿಂಗಳಿಗೆ ಸುಮಾರು 45 ಸಾವಿರ ಸಂಪಾದಿಸಿ, ಕೆಲಸ ಇಲ್ಲ ಅಂತ ಕೈಕಟ್ಟಿ ಕುಳಿತುಕೊಳ್ಳುವ ಸೋಮಾರಿಗಳಿಗೆ ಮಾದರಿಯಾಗಿದ್ದಾರೆ.
ಗುಜರಾತ್ ರಾಜ್ಯದ ಸೂರತ್ ನಗರದ ನಿವಾಸಿ ರಾಜವಿ ಜಾನ್ ಬದುಕು ಕಟ್ಟಿಕೊಂಡ ಕಥೆ ಇಲ್ಲಿದೆ. ಸಮಾಜದಲ್ಲಿ ಮಂಗಳಮುಖಿ ಬದುಕು ಕಟ್ಟಕೊಳ್ಳುವುದು ಸುಲಭದ ಮಾತಲ್ಲ. ಆದ್ರೆ ತಮಗೆದುರಾದ ಎಲ್ಲ ಕಷ್ಟಗಳನ್ನ ಫೇಸ್ ಮಾಡಿರುವ ರಾಜವಿ ಕುರುಕಲ ತಿಂಡಿ ಅಂಗಡಿ ನಡೆಸುತ್ತಿದ್ದು, ಪ್ರತಿನಿತ್ಯ 1,500 ರೂ.ಯಿಂದ 2,000 ರೂ.ವರೆಗೂ ವ್ಯಾಪರ ಮಾಡುತ್ತಾರೆ.
ಐದು ವರ್ಷಗಳಿಂದ ರಾಜವಿ ಪೆಟ್ಸ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು. ಒಳ್ಳೆಯ ಸಂಬಳದ ಜೊತೆಗೆ ಗೌರವ ಎಲ್ಲವೂ ರಾಜವಿ ಅವರಿಗೆ ಸಿಕ್ಕಿತ್ತು. ಆದರೆ ದೇಶಕ್ಕೆ ಒಕ್ಕರಿಸಿದ ಕೊರೊನಾದಿಂದ ಎಲ್ಲ ವ್ಯಾಪಾರ ನಿಂತ ಪರಿಣಾಮ ರಾಜವಿ ಕೆಲಸ ಕಳೆದುಕೊಂಡರು. ಲಾಕ್‍ಡೌನ್ ನಿಂದಾಗಿ ಮಾಡಿಕೊಂಡು ಸಾಲ ಹಿಂದಿರುಗಿಸಲಾಗದೇ ರಾಜವೀ ಸಂಕಷ್ಟದಲ್ಲಿ ಸಿಲುಕಿಕೊಂಡರು. ಆರ್ಥಿಕ ಸಂಕಷ್ಟದಿಂದಾಗಿ ಎಷ್ಟೋ ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ ಅಂತ ಸ್ವತಃ ರಾಜವಿ ಹೇಳ್ತಾರೆ. ಆದ್ರೆ ಆತ್ಮಸ್ಥೈರ್ಯ ಕಳೆದುಕೊಳ್ಳದ ರಾಜವಿ ಕಷ್ಟಗಳ ನಡುವೆಯೇ ಪುಟ್ಟದಾದ ಕುರುಕಲು ತಿಂಡಿ (ರೆಡಿಮೇಡ್ ಸ್ನಾಕ್ಸ್) ಅಂಗಡಿ ತೆರೆದರು. ಈಗ ಅಂಗಡಿಯಲ್ಲಿ ಪ್ರತಿನಿತ್ಯ 1,500 ರೂ.ಯಿಂದ 2 ಸಾವಿರ ರೂ.ವರೆಗೆ ವ್ಯಾಪಾರ ನಡೆಯುತ್ತಿದೆ.
ಅಪ್ಪ-ಅಮ್ಮನ ಪ್ರೀತಿಯಲ್ಲಿ ಬೆಳೆದ ರಾಜವಿ: ಠಾಕೂರ್ ಕುಟುಂಬದಲ್ಲಿ ನನ್ನ ಜನ್ಮವಾಯ್ತು. ತಂದೆ-ತಾಯಿ ಚಿತೆಯೂ ಠಾಕೂರ್ ಅಂತ ಹೆಸರಿಟ್ಟಿದ್ದರು. ಮೂರನೇ ಲಿಂಗದಲ್ಲಿ ನಾನು ಹುಟ್ಟಿದ್ದರೂ ಕುಟುಂಬಸ್ಥರಿಂದ ಸಿಗುವ ಪ್ರೀತಿಯಲ್ಲಿ ಯಾವುದೇ ಕಡಿಮೆಯಾಗಲಿಲ್ಲ. ಅಮ್ಮನ ಪ್ರೀತಿಯ ಮಗುವಾಗಿ ಬೆಳೆದ ನನಗೆ ಎಲ್ಲದಕ್ಕೂ ಬೆನ್ನಲುಬಾಗಿ ನಿಂತರು. ಸಾಮಾನ್ಯವಾಗಿ ನನ್ನಂತಹ ಮಕ್ಕಳನ್ನ ಮಂಗಳಮುಖಿಯರಿಗೆ ನೀಡುತ್ತಾರೆ. ಆದ್ರೆ ನನ್ನ ಅಮ್ಮ ಹಾಗೆ ಮಾಡಲಿಲ್ಲ. ನನ್ನನ್ನು ಓರ್ವ ಹುಡುಗನ ರೀತಿಯಲ್ಲಿ ಬೆಳೆಸಿದ ಅಪ್ಪ-ಅಮ್ಮ ಸಮಾಜದಲ್ಲಿ ಮಾದರಿ ಪೋಷಕರು ಆಗಿದ್ದರು, ಇಂತಹ ಮಕ್ಕಳನ್ನ ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತಿದ್ದರು. ತೃತೀಯ ಲಿಂಗಿಯಾದ್ರೂ ನನ್ನ ಮೇಲೆ ಅಪ್ಪ-ಅಮ್ಮನ ಪ್ರೀತಿ ಎಂದೂ ಕಡಿಮೆಯಾಗಿಲ್ಲ ಎಂದು ರಾಜವಿ ಸಂತೋಷ ವ್ಯಕ್ತಪಡಿಸುತ್ತಾರೆ.
12ನೇ ವಯಸ್ಸಿನಲ್ಲಿ ಮಂಗಳಮುಖಿಯರ ಜೊತೆ ಸೇರ್ಪಡೆ: ಗುಜರಾತಿನಲ್ಲಿ ಹೆಚ್ಚು ಮಂಗಳಮುಖಿಯರನ್ನ ಕಾಣಬಹುದು. ಪೋಷಕರ ಜೊತೆಯಲ್ಲಿದ್ದರೂ ರಾಜವಿ ಮಂಗಳಮುಖಿ ಸಮುದಾಯವನ್ನ ಸೇರಿಕೊಂಡರು. ಅಲ್ಲಿಯೂ ರಾಜವಿ ಅವರಿಗೆ ಒಳ್ಳೆಯ ಸ್ನೇಹ, ಪ್ರೀತಿ ಸಿಕ್ತು. ಗುಜರಾತಿನ ಶೇ.95 ರಷ್ಟು ಮಂಗಳಮುಖಿಯರು ರಾಜವಿ ಅವರನ್ನ ಗುರುತಿಸುತ್ತಾರೆ. 18ನೇ ವಯಸ್ಸಿನಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳುವ ಕೆಲಸವನ್ನ ರಾಜವಿ ಮೊದಲಿಗೆ ಆರಂಭಿಸುತ್ತಾರೆ. ಸುಮಾರು 11 ವರ್ಷ ಈ ಕೆಲಸ ಮಾಡಿದ್ರೂ ಎಂದೂ ಮಕ್ಕಳಲ್ಲಿ ಬೇದಭಾವ ಮಾಡಿಲ್ಲ. ಹಾಗಾಗಿ ಮಕ್ಕಳಿಗೆ ರಾಜವಿ ಅಚ್ಚುಮೆಚ್ಚಿನ ಟೀಚರ್. ಇಂದಿಗೂ ಬಹುತೇಕರು ರಾಜವಿ ಅವರ ಸಂಪರ್ಕದಲ್ಲಿದ್ದಾರೆ.
32ನೇ ವಯಸ್ಸಿನಲ್ಲಿ ಮಹಿಳೆಯಾಗಿ ಬದಲು: ಕುಟುಂಬಸ್ಥರು ನನ್ನನ್ನ ಹುಡುಗನಾಗಿಯೇ ಬೆಳೆಸಿದರು. ಆದ್ರೆ ಶಾರೀರಿಕ ರಚನೆ, ಆಲೋಚನೆಗಳೂ ಬೇರೆ ಇತ್ತು. ಹಾಗಾಗಿ 32ನೇ ವಯಸ್ಸಿಗೆ ಪುರುಷರ ರೀತಿಯಲ್ಲಿ ಬಟ್ಟೆ ತೊಡುವುದನ್ನ ನಿಲ್ಲಿಸಿ, ಸೀರೆ ತೊಟ್ಟು, ಕುಂಕುಮ ಹಚ್ಚಿ, ಕೈತುಂಬ ಬಳೆ ಹಾಕಿಕೊಂಡು ನಿಜವಾದ ಮಂಗಳಮುಖಿಯಂತೆ ಜೀವನ ಆರಂಭಿಸಿದೆ. ಚಿತೆಯೂನಿಂದ ರಾಜವಿ ಜಾನ್ ಆಗಿ ಬದಲಾದೆ. ಕುಟುಂಬಸ್ಥರು ನನ್ನ ನಿರ್ಧಾರಕ್ಕೆ ಬೆಂಬಲ ನೀಡಿದರು ಎಂದು ರಾಜವಿ ಹೇಳುತ್ತಾರೆ.
ಆರಂಭದಲ್ಲಿ ನನ್ನ ಅಂಗಡಿಗೆ ಬರಲು ಗ್ರಾಹಕರು ಹಿಂದೇಟು ಹಾಕುತ್ತಿದ್ದರು. ಈಗ ಸಮಯ ಬದಲಾಗಿದ್ದು, ಗ್ರಾಹಕರು ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನ ಖರೀದಿಸುತ್ತಾರೆ. ದಿನದಿಂದ ದಿನಕ್ಕೆ ನಗರದಲ್ಲಿ ಅಂಗಡಿ ಚಿರಪರಿಚಿತವಾಗುತ್ತಿದ್ದು, ವ್ಯಾಪಾರವೂ ವೃದ್ಧಿ ಆಗ್ತಿದೆ. ಮುಂದಿನ ದಿನಗಳಲ್ಲಿ ನನ್ನ ಸಮಾಜದವರಿಗೆ ಗೌರವ ಸಿಗುವಂತಾಗಲಿ ಎಂದು ರಾಜವಿ ತಮ್ಮ ಆಸೆಯನ್ನ ಹೊರ ಹಾಕಿದರು.