ಲಾಕ್‍ಡೌನ್‍ನಲ್ಲಿ ಹೆಚ್ಚಾಯ್ತು ಕರಾವಳಿಯ ಪೊಲೀಸರಿಗೆ ಕೊರೊನಾ ಸೋಂಕು!

Public TV
2 Min Read
kwr woman police

ಕಾರವಾರ: ಒಂದೆಡೆ ಏರುತ್ತಲೇ ಸಾಗಿರುವ ಕೊರೊನಾ ಸೋಂಕಿತರ ಸಂಖ್ಯೆ. ಇನ್ನೊಂದೆಡೆ ದಿನಕ್ಕೊಂದು ಆದೇಶ ಹೊರಡಿಸಿ ಜನ ಸಾಮಾನ್ಯರನ್ನು ಮಾತ್ರವಲ್ಲ ಆಡಳಿತವರ್ಗವನ್ನು ಗೊಂದಲಕ್ಕೆ ಸಿಲುಕಿಸುತ್ತಿರುವ ಸರ್ಕಾರ. ಈ ಎಲ್ಲದರ ನಡುವೆ ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಚೈನ್ ಬ್ರೇಕ್ ಮಾಡುವುದಕ್ಕೋಸ್ಕರ ಹಗಲಿರುಳು ಮನೆ ಕುಟುಂಬವನ್ನು ಬಿಟ್ಟು ಬೀದಿ ಬದಿ ಶ್ರಮಿಸುತ್ತಿರುವ 250 ಕ್ಕೂ ಹೆಚ್ಚು ಪೊಲೀಸರಿಗೇ ಸೋಂಕು ತಗುಲಿದೆ.

kwr sirsi police

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಇನ್ನು ಕಡಿಮೆಯಾಗುವ ಲಕ್ಷಣಗಳು ಮಾತ್ರ ಕಂಡುಬರುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದ್ದು, ಸಾವನ್ನಪ್ಪುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇನ್ನು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೊಲೀಸರಿಗೂ ಬಿಟ್ಟಿಲ್ಲ. ಈವರೆಗೆ ಜಿಲ್ಲೆಯಲ್ಲಿ ಸುಮಾರು 251 ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ 188 ಪೊಲೀಸರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು 63 ಪೊಲೀಸರೂ ಸದ್ಯ ಹೋಂ ಕ್ವಾರಂಟೈನ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು ಅದೃಷ್ಟವಶಾತ್ ಸೋಂಕಿನಿಂದ ಪೊಲೀಸರಲ್ಲಿ ಯಾವುದೇ ಪ್ರಾಣಾಪಾಯ ಎದುರಾಗಿಲ್ಲ.

kwr police

ಲಾಕ್‍ಡೌನ್ ಆಗುವವರೆಗೆ ಜಿಲ್ಲೆಯಲ್ಲಿ ಪೊಲೀಸರಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿತ್ತು. ಲಾಕ್‍ಡೌನ್ ಪ್ರಾರಂಭವಾದ ನಂತರ ಪೊಲೀಸರು 24 ಗಂಟೆಗಳ ಕಾಲ ರಸ್ತೆಯಲ್ಲಿಯೇ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಕಾರ್ಯನಿರ್ವಹಿಸಿದ ಪರಿಣಾಮ ಸೋಂಕು ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ 1,803 ಪೊಲೀಸ್ ಸಿಬ್ಬಂದಿ ಲಾಕ್‍ಡೌನ್ ವೇಳೆಯಲ್ಲಿ ಜನರ ಓಡಾಟಕ್ಕೆ ಬ್ರೇಕ್ ಹಾಕಲು, ಆಸ್ಪತ್ರೆ, ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಸೋಂಕು ತಗುಲಿದ್ದರು ಪ್ರಾಣಾಪಾಯ ಆಗದೇ ಇರುವುದಕ್ಕೆ ಲಸಿಕೆಯೇ ಮುಖ್ಯ ಕಾರಣವಾಗಿದೆ.

kwr goa checkpost 3

ಈ ವರೆಗೆ 15,55 ಪೊಲೀಸ್ ಸಿಬ್ಬಂದಿಗೆ ಲಸಿಕೆಯನ್ನು ಹಾಕಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಲೇಬೇಕು ಎಂದು ಪ್ರತಿ ಠಾಣೆಯ ಅಧಿಕಾರಿಗಳಿಗೆ ಆದೇಶ ಮಾಡಿದ ಪರಿಣಾಮ ಎಲ್ಲರೂ ಹಾಕಿಸಿಕೊಂಡಿದ್ದರು.

ಅನಾರೋಗ್ಯ, ಬಾಣಂತಿ, ಗರ್ಭಿಣಿಯರು ಹೀಗೆ 248 ಜನ ಪೊಲೀಸರು ಲಸಿಕೆ ಪಡೆದಿಲ್ಲ, ಅಲ್ಲದೇ 179 ಜನರು ಮೊದಲ ಡೋಸ್ ಪಡೆದಿದ್ದಾರೆ. ಇಷ್ಟೇ ಅಲ್ಲದೇ ಪೊಲೀಸರ ಆತ್ಮಸ್ಥೈರ್ಯ ತುಂಬಲ ಪ್ರತಿ ಠಾಣೆಯಲ್ಲಿ “ಹಬೆ” ವ್ಯವಸ್ಥೆಯನ್ನು ಸಹ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮಾಡಿದ ಪರಿಣಾಮ ಅನಾಹುತ ಆಗಿಲ್ಲ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿದ್ದು, ಜನರು ಅರ್ಥಮಾಡಿಕೊಂಡು ಅನಾವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಬೇಕಿದೆ.

kwr goa checkpost

ಸದ್ಯ ಪೊಲೀಸರು ಕೊರೋನಾ ಸೋಂಕಿಗೆ ಹೆಚ್ಚಾಗಿ ತುತ್ತಾಗಬಾರದು ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜ್ ಪ್ರತಿ ಸಿಬ್ಬಂದಿಯೂ ಕಾರ್ಯನಿರ್ವಹಿಸುವ ವೇಳೆ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಸುರಕ್ಷತೆಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಸೂಚಿಸಿದ್ದಾರೆ. ಒಟ್ಟಿನಲ್ಲಿ ಜನರ ಪ್ರಾಣ ಕಾಪಾಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆಗಿಳಿದು ದುಡಿಯುವ ಪೊಲೀಸರಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಆವರಿಸಿರುವುದು ಆತಂಕ ಹುಟ್ಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *