ಬೆಂಗಳೂರು: ಸೋಮವಾರ ಕೆಸಿ ಜನರಲ್ ಆಸ್ಪತ್ರೆ ಮುಂದೆ 800ಕ್ಕೂ ಹೆಚ್ಚು ಜನ ಲಗ್ಗೆ ಇಟ್ಟಿದ್ದರೆ ಇಂದು ಬೆಂಗಳೂರಿನ ಜನ ನೆಲಮಂಗಲಕ್ಕೆ ಲಸಿಕೆ ಹಾಕಿಸಲು ವಲಸೆ ಬಂದಿದ್ದಾರೆ.
ಹೌದು. ಬೆಂಗಳೂರು ನಗರದಲ್ಲಿ ಲಸಿಕೆ ಸಿಗುತ್ತಿಲ್ಲ. ಎರಡನೇ ಡೋಸ್ ನೀಡಿದವರಿಗೆ ಲಸಿಕೆ ಸಿಗದ ಕಾರಣ ಮೊದಲ ಡೋಸ್ ಪಡೆಯುವವರಿಗೆ ಲಸಿಕೆ ಸಿಗುವುದು ಅನುಮಾನವಾಗಿದೆ. ಹೀಗಾಗಿ ಬೆಂಗಳೂರಿನ ಜನ ನೆಲಮಂಗಲದತ್ತ ಮುಖ ಮಾಡಿದ್ದಾರೆ.
ಲಾಕ್‍ಡೌನ್ ನಡುವೆಯೂ ಬೆಂಗಳೂರಿನಿಂದ ನೂರಾರು ಜನ ತಂಡ ತಂಡವಾಗಿ ಇಂದು ಬೆಳಗ್ಗೆ ಬೈಕ್, ಕಾರುಗಳಲ್ಲಿ ನೆಲಮಂಗಲ ತಾಲೂಕು ಆಸ್ಪತ್ರೆಗೆ ಆಗಮಿಸಿದ್ದಾರೆ. ಬೆಂಗಳೂರಿನಿಂದ ಜನ ಬಂದಿರುವುದನ್ನು ನೋಡಿದ ಸ್ಥಳೀಯರು ಮೊದಲು ನಮಗೆ ಲಸಿಕೆ ಕೊಡಿ ನಂತರ ಬೆಂಗಳೂರಿನ ಜನತೆಗೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.
ಲಸಿಕೆ ಪಡೆಯಲು ಮೊದಲೇ ಸ್ಥಳೀಯರು ಸಾಲಿನಲ್ಲಿ ನಿಂತಿದ್ದರು. ಬೆಂಗಳೂರಿನ ಜನ ಭಾರೀ ಸಂಖ್ಯೆಯಲ್ಲಿ ಬರುತ್ತಿರುವುದನ್ನು ನೋಡಿ ಸಿಟ್ಟಾದ ಜನ ಗಲಾಟೆ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಈಗ ಸ್ಥಳೀಯರಿಗೆ ಮತ್ತು ಬೆಂಗಳೂರಿಗರಿಗೆ ಪ್ರತ್ಯೇಕ ಸಾಲನ್ನು ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.