ಬೆಂಗಳೂರು: ಲಸಿಕೆ ಕೇಳಿದರೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ನೇಣುಹಾಕಿಕೊಳ್ಳಬೇಕಾ ಎಂದು ಕೇಳುತ್ತಾರೆ. ಹಾಗಾದ್ರೆ ಜನ ನೇಣು ಹಾಕಿಕೊಳ್ಳಬೇಕಾ ಹೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಸದಾನಂದಗೌಡರು ನೇಣುಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ. ಲಸಿಕೆ ಕೇಳಿದರೆ ನೇಣುಹಾಕಿಕೊಳ್ಳಬೇಕಾ ಎನ್ನುತ್ತೀರಿ. ಹಾಗಾದರೆ ಲಸಿಕೆ ಸಿಗುತ್ತಿಲ್ಲ, ಜನ ನೇಣು ಹಾಕಿಕೊಳ್ಳಬೇಕಾ. ನೀವು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾಗಿದ್ದೀರಿ. ನಿಮ್ಮನ್ನಲ್ಲದೆ ಯಾರನ್ನು ಕೇಳಬೇಕು? ಸಾವಿನ ಮೆರವಣಿಗೆ ನಡೆಯುತ್ತಿದೆ ಎಂದು ಕಿಡಿಕಾರಿದರು.
Advertisement
Advertisement
ರೆಮ್‍ಡಿಸಿವಿರ್ ಸೇರಿದಂತೆ ವಿವಿಧ ಪರಿಕರಗಳ ಖರೀದಿಗೆ ಗ್ಲೋಬಲ್ ಟೆಂಡರ್ ಕರೆಯಲು ಮುಂದಾಗಿದ್ದೀರಿ. ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಕಮಿಷನ್ ನಡೆಯುತ್ತಿದೆ ಎಂದು ಗೊತ್ತಾಗುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ವ್ಯಾಕ್ಸಿನ್ ಬೆಲೆಗೂ, ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಬೆಲೆಗೂ ತುಂಬಾ ವ್ಯತ್ಯಾಸ ಇದೆ. ನಾವು ಸುಮ್ಮನೆ ಬಿಡುವುದಿಲ್ಲ, ಜನರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
Advertisement
ನಮ್ಮ ಕ್ಷೇತ್ರಗಳ ಬೇರೆ ಕೆಲಸಗಳನ್ನು ನಿಲ್ಲಿಸಲು ಸಿದ್ಧರಿದ್ದೇವೆ. ಎಲ್ಲ ಶಾಸಕರು, ಸಂಸದರು ಸೇರಿ 100 ಕೋಟಿ ಪ್ರದೇಶಾಭಿವೃದ್ಧಿ ನಿಧಿಯನ್ನು ಕೊರೊನಾ ಲಸಿಕೆ ಕೊಳ್ಳಲು ನೀಡುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
Advertisement
ನ್ಯಾಯಾಧೀಶರೇನು ಸರ್ವಜ್ಞರಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಮಾತನಾಡುವುದು ಸರಿಯೇ? ನಮ್ಮಲ್ಲೂ ಅನೇಕರು ಕಾನೂನು ಓದಿದವರೇ ಸಿಎಂ ಆಗಿದ್ದಾರೆ. ಕನಿಷ್ಠ ಪಕ್ಷ ಅವರ ಪಕ್ಷದವರು ಖಂಡಿಸಲಿಲ್ಲ. ಕೋರ್ಟ್ ಇರೋದು ಯಾಕೆ? ಶಾಸಕಾಂಗ, ಕಾರ್ಯಾಂಗ ತಪ್ಪು ಮಾಡಿದರೆ ನ್ಯಾಯಾಂಗವೇ ತಿದ್ದಬೇಕು ಅಲ್ಲವೇ? ಒಬ್ಬ ಬಿಜೆಪಿ ಜನರಲ್ ಸೆಕ್ರಟರಿ ನ್ಯಾಯಾಧೀಶರನ್ನೇ ಅವಹೇಳನ ಮಾಡುತ್ತಾರೆ. ಇದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಕಿಡಿಕಾರಿದರು.
ನ್ಯಾಯಾಂಗ ವ್ಯವಸ್ಥೆಗೆ ರಾಜ್ಯ ಮಾದರಿಯಾಗಿದೆ. ಅಂತಹ ರಾಜ್ಯದವರಾದ ನೀವು, ಹೀಗೆ ಹೇಳುವ ಮೂಲಕ ನ್ಯಾಯಾಂಗದ ತೀರ್ಪನ್ನೇ ಉಲ್ಲಂಘಿಸಿದ್ದೀರಿ. ನ್ಯಾಯಾಧೀಶರನ್ನೇ ಸರ್ವಜ್ಞರಲ್ಲ ಎಂದು ಅವಹೇಳನ ಮಾಡಿದ್ದೀರಿ. ನೀವು, ನಿಮ್ಮ ಕೇಂದ್ರ ನಾಯಕರು ಇದಕ್ಕೆ ಉತ್ತರ ಕೊಡಬೇಕು. ಮಾತಿನ ಮೇಲೆ ಸೌಜನ್ಯ ಬೇಡವೇ, ನೀವು ಕಾನೂನು ಇಲಾಖೆ ಇಟ್ಟುಕೊಂಡಿರುವುದು ಯಾಕೆ? ಕ್ಯಾನ್ಸಲ್ ಮಾಡಿಬಿಡಿ. ನಾಗರಿಕ ಹಕ್ಕುಗಳಿಗೆ ಕಡಿವಾಣ ಹಾಕಿದ್ದೀರಿ. ಸಂವಿಧಾನವನ್ನು ಕಾಪಾಡಲು ವಿಫಲರಾಗಿದ್ದೇವೆ, ಸಿಎಂ ಇದರ ಬಗ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.