ಮಡಿಕೇರಿ: ಮತಾಂತರ ಮಾಡುವುದಕ್ಕಾಗಿಯೇ ಮದುವೆ ಆಗುವುದನ್ನು ತಡೆಗಟ್ಟುವುದಕ್ಕಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಕೊಡಗಿನ ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರುವ ವಿಷಯ ಹಿಂದಿನಿಂದಲೂ ಚರ್ಚೆಯಲ್ಲಿತ್ತು. ಇದೀಗ ಕಾನೂನು ತರುವುದಕ್ಕೆ ಕಾಲ ಕೂಡಿ ಬಂದಿದೆ. ಅಲಹಬಾದ್ ಕೋರ್ಟ್ ಕೂಡ ಲವ್ ಜಿಹಾದ್ ವಿರುದ್ಧ ತೀರ್ಪು ನೀಡಿದೆ. ಉತ್ತರ ಪ್ರದೇಶ ಸಿಎಂ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದಿದ್ದಾರೆ ಎಂದರು.
Advertisement
Advertisement
ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗುವುದು. ಈಗಾಗಲೇ ಪಕ್ಷದ ಕೋರ್ ಕಮಿಟಿಯಲ್ಲೂ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ತರಲಾಗುವುದು. ಮದುವೆಯಾಗಿ ಬಳಿಕ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವುದು ಸರಿಯಲ್ಲ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
Advertisement
ಕೊಡಗಿನಲ್ಲೇ ಮೊಮ್ಮಗನ ನಾಮಕರಣ ಮಾಡಿದ ಡಿವಿಎಸ್ ಸದಾ ರಾಜಕಾರಣದ ಗುಂಗಿನಲ್ಲೇ ಬ್ಯುಸಿಯಾಗಿರುತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಇಂದು ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಮೊಮ್ಮಗನ ನಾಮಕರಣ ಕಾರ್ಯಕ್ರಮಮದಲ್ಲಿ ಭಾಗವಹಿಸಿ ಸಂತೋಷದಿಂದ ಕಾಲ ಕಳೆದರು.
Advertisement
ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ತಮ್ಮ ಸೋದರ ಸಂಬಂಧಿ ನಾಣಯ್ಯ ಅವರ ಮನೆಯಲ್ಲಿ ತಮ್ಮ ಮೊಮ್ಮಗನ ನಾಮಕರಣದಲ್ಲಿ ಭಾಗಿಯಾಗಿ ಇಡೀ ದಿನ ಕಾಲ ಕಳೆದರು. ಕೋವಿಡ್ ಇರುವ ಹಿನ್ನೆಲೆಯಲ್ಲಿ ಬೇರೆ ಯಾರಿಗೂ ಕೂಡ ಆಹ್ವಾನ ನೀಡಿರಲಿಲ್ಲ. ಸದಾನಂದಗೌಡರ ಮಗ ಕಾರ್ತಿಕ್, ಅವರ ಪತ್ನಿ ಮತ್ತು ಬೀಗರಾದ ನಾಣಯ್ಯ ಅವರ ಕುಟುಂಬದವರು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾಣಯ್ಯ ಅವರ ಪತ್ನಿ ಸುಧಾನಾಣಯ್ಯ ತಮ್ಮ ಮೊಮ್ಮಗನನ್ನು ಕಾಲ ಮೇಲೆ ಮಲಗಿಸಿಕೊಂಡು ವಿವಿಧ ಆಚರಣೆಗಳನ್ನು ನೆರವೇರಿಸಿದರು.
ಈ ವೇಳೆ ಸದಾನಂದಗೌಡ ಮತ್ತು ಪತ್ನಿ ಡಾಟಿ ಸದಾನಂದಗೌಡ ಅವರು ಮೊಮ್ಮಗನ ಕೊರಳಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ಹಾಕಿದರು. ಅಲ್ಲದೆ ಬೆಳ್ಳಿಯ ಹೊಳಲೆಯಲ್ಲಿ ಬೆಣ್ಣೆ ತಿನ್ನಿಸಿ ಹಾರೈಸಿದರು. ಅರೆಗೌಡ ಸಂಪ್ರದಾಯದಂತೆ ನಾಮಕರಣ ಮಾಡಿ ಬಳಿಕ ತೊಟ್ಟಿಲಿಗೆ ಹಾಕಿ ತೂಗಿ ಸಂಭ್ರಮಿಸಿದರು. ಮೊಮ್ಮಗನಿಗೆ ದಕ್ಷ್ ಎಂದು ಹೆಸರಿಟ್ಟು ಹಾರೈಸಿದ್ದೇವೆ. ದೊಡ್ಡವರಾದ ಮೇಲೆ ಯಾವ ಹೆಸರಿಟ್ಟುಕೊಳ್ಳುತ್ತಾರೋ ಯಾರಿಗೆ ಗೊತ್ತು ಎಂದು ಸದಾನಂದಗೌಡ ಹಾಸ್ಯವಾಡಿದರು.