ಮಂಗಳೂರು: ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂದು ಯೋಚಿಸಿದಾಗ ಮಾತ್ರ ಸೇವೆ ಮಾಡಲು ಸಾಧ್ಯ. ಅಂತಹ ಸೇವಾಕಾರ್ಯವನ್ನು ಲಯನ್ಸ್ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಖ್ಯಾತ ಚಿತ್ರನಟ, ರಂಗಕರ್ಮಿ ಮಂಡ್ಯ ರಮೇಶ್ ಹೇಳಿದರು.
ನಗರದ ಲೇಡಿಹಿಲ್ ಸಮೀಪದ ಕೃಷ್ಣ ಹೆರಿಟೇಜ್ ನಲ್ಲಿ ಪ್ರಾಂತ್ಯಾಧ್ಯಕ್ಷ ಉಮೇಶ್ ಪ್ರಭು ಇವರ ನೇತೃತ್ವದಲ್ಲಿ ನಡೆದ ಲಯನ್ಸ್ ಜಿಲ್ಲೆ 317ಆ, ಇದರ ರೀಜನ್ 5ರ “ಪ್ರಾಂತೀಯ ಸಮ್ಮೇಳನ” “ನಕ್ಷತ್ರ”ದಲ್ಲಿ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು. ಆರಂಭದಲ್ಲಿ ತುಳುವಿನಲ್ಲಿ ಕುಡ್ಲದ ಜನಕ್ಲೆಗೆ ಎನ್ನ ನಮಸ್ಕಾರ. ಎಂಚ ಉಲ್ಲರ್ (ಮಂಗಳೂರಿನ ಜನತೆಗೆ ನನ್ನ ನಮಸ್ಕಾರ, ಹೇಗಿದ್ದಿರಿ..?) ಎಂದು ಮಾತು ಆರಂಭಿಸಿದ ಅವರು ಬಳಿಕ ಕನ್ನಡದಲ್ಲಿ ಮಾತನಾಡಿದರು.
Advertisement
Advertisement
ದೇವರು ಸೇವೆ ಮಾಡಲು ಬೇರೆ ಬೇರೆ ರೂಪದಲ್ಲಿ ಅವಕಾಶ ನೀಡುತ್ತಾನೆ. ಸಿಕ್ಕಿದ ಅವಕಾಶವನ್ನು ಸದಪಯೋಗಪಡಿಸಿಕೊಂಡು ಸೇವೆ ಮಾಡಿದಾಗ ಆತ್ಮಕ್ಕೆ ತೃಪ್ತಿ ಸಿಗುತ್ತದೆ ಎಂದರು. ಸೇವೆಯಲ್ಲಿ ಮುಂಚೂಣಿಯಲ್ಲಿರುವ ಲಯನ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಸೇವೆ ಮಾಡುವುದನ್ನು ಬಾಲ್ಯದಲ್ಲೇ ಕಲಿಸುವ ಕೆಲಸವಾಗಲಿ ಎಂದು ಅಭಿಪ್ರಾಯಪಟ್ಟರು.
Advertisement
ಕಲೆ, ಸಾಹಿತ್ಯ, ಶಿಕ್ಷಣ, ಉದ್ಯಮ, ದೈವರಾಧನೆ ಮುಂತಾದ ಅನೇಕ ಚಟುವಟಿಕೆಗಳಿಗೆ ಹೆಸರು ಪಡೆದ ಜಿಲ್ಲೆಯೆಂದರೆ ಅದು ದ.ಕ.ಜಿಲ್ಲೆ. ಇಲ್ಲಿ ಎಲ್ಲವೂ ಇದೆ. ಇಲ್ಲಿನ ಜನರು ಪ್ರತಿಭಾನ್ವಿತರು, ಬುದ್ಧಿವಂತರು, ಕನ್ನಡ, ತುಳು, ಕೊಂಕಣಿ, ಬ್ಯಾರಿ, ಹಿಂದಿ, ಇಂಗ್ಲೀಷ್ ಈ ರೀತಿ ಅತೀ ಹೆಚ್ಚು ಭಾಷೆ ಮಾತಾನಾಡುವ ಕರ್ನಾಟಕದ ಏಕೈಕ ಜಿಲ್ಲೆ ಇದ್ದರೆ ಅದು ದ.ಕ.ಜಿಲ್ಲೆ.
Advertisement
ಇಲ್ಲಿ ಕಲೆಯಿದೆ, ಉದ್ಯಮವಿದೆ, ವಿಧ್ವತ್ವ ಇದೆ. ದೈವತ್ವ ಇದೆ, ಆಧ್ಯಾತ್ಮತೆ ಇದೆ, ಪಾಶ್ಚತ್ಯ, ಪೌರತ್ವ ಎಲ್ಲವನ್ನು ಇಲ್ಲಿ ಕಾಣಬಹುದು. ಇದು ಪ್ರೀತಿ ಬಾವದ ಜಾಗ, ಎಲ್ಲದಕ್ಕೂ ಖ್ಯಾತಿ ಪಡೆದಿರುವ ಈ ಮಂಗಳೂರಿನ ಮಣ್ಣಿಗೆ ಕಾಲಿಟ್ಟಗ ಮೈ ರೋಮಾಂಚನೆಗೊಳ್ಳುತ್ತದೆ. ಹಲವಾರು ಕ್ಷೇತ್ರಗಳಲ್ಲಿ ಹತ್ತು ಹಲವು ರೀತಿಯ ಕೊಡುಗೆಗಳನ್ನು ನೀಡಿದ ದ.ಕ.ಜಿಲ್ಲೆಗೆ ಬರುವುದೆಂದರೆ ನನಗೆ ಅದೊಂದು ರೀತಿಯ ಖುಷಿ, ಸಂಭ್ರಮ ಎಂದು ಮಂಡ್ಯ ರಮೇಶ್ ಜಿಲ್ಲೆಯ ಸಮಗ್ರ ವಿಷಯ, ವಿಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂತ್ಯಧ್ಯಕ್ಷ ಉಮೇಶ್ ಪ್ರಭು ಅವರು ಮಾತನಾಡಿ, ಒಬ್ಬ ಲಯನ್ ಆಗಿ ಸಮಾಜದ ಬಗ್ಗೆ ಚಿಂತನೆ, ಕಳಕಳಿ ಇರಬೇಕು. ಹಾಗಾದಾಗ ಮಾತ್ರ ಸೇವೆ ಮಾಡಬೇಕು ಎಂಬ ಮನೋಭಾವನೆ ಬೆಳೆಯುತ್ತದೆ. ನಮ್ಮ ತಂಡ ಉತ್ತಮವಾಗಿ ಸೇವಾಕಾರ್ಯವನ್ನು ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. ನಮ್ಮ ಲಯನ್ಸ್ ತಂಡದ ಮೂಲಕ ನಿರಂತರವಾಗಿ ನಡೆಯುತ್ತಿರುವ ಸೇವಾಕಾರ್ಯದಲ್ಲಿ ಪ್ರತಿಯೊಬ್ಬರ ಪಾತ್ರವು ಪ್ರಾಮುಖ್ಯತೆಯನ್ನು ಪಡೆದಿದೆ. ಸೇವಾ ಕಾರ್ಯದಲ್ಲಿ ತೊಡಗಿರುವ ತಂಡದ ಪ್ರತಿಯೊಬ್ಬರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಅವರು ಹೇಳಿದರು.
ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಸಂಗೀತಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಡಾ. ವೈಷ್ಣವಿ ಕಿಣಿ ಹಾಗು ಸಂಸ್ಕೃತ ಭಾಷೆಯಲ್ಲಿ ವಿಶೇಷ ಸಾಧನೆ ಮಾಡಿದ ಶಾಂತಲಾರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅರ್ಥಿಕ ನೆರವು ವಿತರಣೆ:
ಕಾರ್ಯಕ್ರಮದಲ್ಲಿ ಪ್ರಾಂತ್ಯದ ವತಿಯಿಂದ ಜಿಲ್ಲಾ ಡಯಲಿಸ್ ಸೆಂಟರ್‍ಗೆ ಅರ್ಥಿಕ ನೆರವು ನೀಡಲಾಯಿತು. ಸೆಂಟರ್‍ನ ಪ್ರಮುಖರಾದ ಪಿಡಿಜಿ ಕೆ.ಸಿ.ಪ್ರಭು ಹಾಗು ಶಾಂತೇರಿ ಪ್ರಭು ಇವರಿಗೆ ಪ್ರಾಂತ್ಯಾಧ್ಯಕ್ಷ ಉಮೇಶ್ ಪ್ರಭು ಅವರು ಚೆಕ್ ಹಸ್ತಾಂತರಿಸಿದರು. ಇದೇ ಸಂದರ್ಭ ಜಿಲ್ಲಾ ರಾಜ್ಯಪಾಲ ಡಾ. ಗೀತಾ ಪ್ರಕಾಶ್ ಇವರ ಜಿಲ್ಲಾ ಯೋಜನೆಗೆ ಅರ್ಥಿಕ ನೆರವು ನೀಡಲಾಯಿತು.
ಪ್ರಾಂತೀಯ ಸಮ್ಮೇಳನದ ಸಮಿತಿಯ ಅಧ್ಯಕ್ಷೆ ಆಶಾ ಸಿ. ಶೆಟ್ಟಿ, ಖಜಾಂಜಿ ಜೈರಾಜ್ ಪ್ರಕಾಶ್, ವಲಯ ಅಧ್ಯಕ್ಷರಾದ ಸ್ವರೂಪ್ ಎನ್.ಶೆಟ್ಟಿ, ರವೀಂದ್ರನಾಥ್ ಶೆಟ್ಟಿ, ಪ್ರಾಂತೀಯ ಸಲಹೆಗಾರ ನಾಗೇಶ್ ಕುಮಾರ್ ಎನ್.ಜೆ, ವಲಯ ಸಲಹೆಗಾರ ಜೀವನ್ ದಾಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನದ ಸಲಹೆಗಾರರಾದ ಗೋವರ್ಧನ ಶೆಟ್ಟಿ, ಅರವಿಂದ್ ಶೆಣೈ ಹಾಗೂ ಸಾರ್ವಜನಿಕ ಸಂಪರ್ಕಧಿಕಾರಿ ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು.
ನಿನ್ನೆಟ್ ಟೆಲ್ಲಿಸ್ ಹಾಗು ವಿಲ್ಸನ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂತೀಯ ಸಮ್ಮೇಳನದ ಸಮಿತಿಯ ಕಾರ್ಯದರ್ಶಿ ಸೈಮನ್ ಲೋಬೋ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಾಜೇಶ್ ಮತ್ತು ರಚನಾ ಕಾಮಾತ್ ಇವರಿಂದ ಮನೋರಂಜನಾ ಕಾರ್ಯಕ್ರಮ ನೆರವೇರಿತು.