ನವದೆಹಲಿ: ಗಲ್ವಾನ್ ಘರ್ಷಣೆಯ ಬಳಿಕ ಲಡಾಖ್ ಗಡಿಯಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಈಗಾಗಲೇ ಹಾರಾಟ ನಡೆಸುತ್ತಿವೆ. ಈಗ ಇವುಗಳ ಜೊತೆ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸಲು ವಾಯುಸೇನೆ ಚಿಂತನೆ ನಡೆಸಿದೆ.
ಭಾರತ ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ ವಾಯು ಸೇನೆ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ನೇತೃತ್ವದ ಉನ್ನತ ವಾಯುಪಡೆಯ ಕಮಾಂಡರ್ ಗಳ ತಂಡ ಎರಡು ದಿನಗಳ ಕಾಲ ಲಡಾಕ್‍ಗೆ ಭೇಟಿ ನೀಡಲಿದೆ.
Advertisement
Advertisement
ಭೂ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಭೇಟಿ ಬಳಿಕ ವಾಯು ಸೇನೆ ತಂಡ ಭೇಟಿ ನೀಡುತ್ತಿದ್ದು, ಲಡಾಕ್‍ನಲ್ಲಿರುವ ಚೀನಾ ಭಾರತದ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಪ್ರದೇಶ ಹಾಗೂ ಆ ಭಾಗದಲ್ಲಿ ನಡೆಯುತ್ತಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಪರಿಸ್ಥಿತಿಯ ಪರಿಶೀಲನೆ ನಡೆಸಲಿದೆ.
Advertisement
ಎರಡು ದಿನದ ಭೇಟಿಯಲ್ಲಿ ಈ ಪ್ರದೇಶದಲ್ಲಿ ವಾಯುಪಡೆ ಅವಳಿ-ಎಂಜಿನ್ ಫೈಟರ್ ಜೆಟ್ ಹಾಗೂ ಜುಲೈ ಅಂತ್ಯದ ವೇಳೆಗೆ ಭಾರತಕ್ಕೆ ಬರಲಿರುವ ರಫೇಲ್ ಫೈಟರ್ ಜೆಟ್‍ಗಳು ನಿಯೋಜಿಸುವ ಬಗ್ಗೆ ಮುಖ್ಯವಾಗಿ ಚರ್ಚೆಯಾಗಲಿದೆ. ಸುಖೋಯ್-30 ಎಂಕೆಐ ಮತ್ತು ಮಿರಾಜ್-2000 ಸೇರಿದಂತೆ ಇತರ ಫೈಟರ್ ಜೆಟ್‍ಗಳ ಸಮನ್ವಯದೊಂದಿಗೆ ಉತ್ತರದ ಗಡಿಗಳಲ್ಲಿ ರಫೇಲ್ ಫೈಟರ್ ಜೆಟ್‍ಗಳನ್ನು ಶೀಘ್ರವಾಗಿ ನಿಯೋಜಿಸುವ ಬಗ್ಗೆ ವಾಯುಪಡೆ ಗಮನ ಹರಿಸಿದ್ದು, ಈ ಬಗ್ಗೆ ಯೋಜನೆಗಳನ್ನು ರೂಪಿಸಲಿದೆ.
Advertisement
ಪೂರ್ವ ಲಡಾಕ್‍ನಿಂದ ಅರುಣಾಚಲ ಪ್ರದೇಶದವರೆಗಿನ ಗಡಿ ಪ್ರದೇಶ, ಎಲ್‍ಎಸಿ ಉದ್ದಕ್ಕೂ ವಾಯುಪಡೆಯು ತನ್ನ ಫೈಟರ್ ಜೆಟ್‍ಗಳನ್ನು ಸಕ್ರಿಯವಾಗಿ ನಿಯೋಜಿಸಲು ತೀರ್ಮಾನಿಸಿದೆ. ಐಎಎಫ್‍ನ ಹಿರಿಯ ಅಧಿಕಾರಿಗಳು ಎರಡು ದಿನದ ಭೇಟಿಯಲ್ಲಿ ಚೀನಾದ ಮಿಲಿಟರಿ ರಚನೆಯನ್ನು ಆಧರಿಸಿ ಭಾರತದ ಪ್ರತಿರೋಧದ ಶಕ್ತಿಯನ್ನು ನಿಯೋಜಿಸಲಿದ್ದಾರೆ.
ಜೂನ್ 2ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲೆ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಈ ವೇಳೆ ಫ್ರಾನ್ಸ್‌ನಲ್ಲಿ ಕೋವಿಡ್ 19 ಇದ್ದರೂ ನಿಗದಿಯಂತೆ ಜುಲೈ 27ರ ಒಳಗಡೆ ಭಾರತಕ್ಕೆ ಯುದ್ಧ ವಿಮಾನಗಳನ್ನು ತಲುಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿತ್ತು.
58 ಸಾವಿರ ಕೋಟಿ ರೂ.ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಐಎಎಫ್‌ನ ಅತ್ಯಂತ ಪ್ರಮುಖ ನೆಲೆಗಳಲ್ಲಿ ಒಂದಾಗಿರುವ ಹರ್ಯಾಣದ ಅಂಬಾಲ ವಾಯನೆಲೆಯಲ್ಲಿ ಮೊದಲ ಸ್ಕ್ವಾಡ್ರನ್ಅನ್ನು ಇರಿಸಲಾಗಿತ್ತದೆ.