ಬೆಂಗಳೂರು: ಕೊರೊನಾ ರ‍್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ ಎಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತನ ಮೊಬೈಲ್‍ಗೆ ನೆಗೆಟಿವ್ ಎಂದು ಸಂದೇಶ ಕಳುಹಿಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದಲ್ಲಿ ಜುಲೈ 24 ರಂದು ನಡೆಸಿದ್ದ ರ‍್ಯಾಪಿಡ್ ಟೆಸ್ಟ್ ನಲ್ಲಿ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ ಅಂದೇ ಆತನನ್ನು ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್‍ನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಕ್ವಾರಂಟೈನ್ ಮಾಡಿದ್ದರು. ಆದರೆ ಮರುದಿನ ಜುಲೈ 25 ರಂದು ಆತನ ಮೊಬೈಲ್‍ಗೆ ನಿಮ್ಮ ಟೆಸ್ಟ್ ನೆಗೆಟಿವ್ ಬಂದಿದೆ ಎಂದು ಸಂದೇಶ ಬಂದಿದೆ.
Advertisement
Advertisement
ಸದ್ಯ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿರುವ ಯುವಕ, ನನಗೆ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿ ಮಾಹಿತಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಲು ತಿಳಿಸುತ್ತಾರೆ. ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೆ ನಿಮ್ಮ ಗ್ರಾಮ ಪಂಚಾಯಿತಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಎಂದು ಹೇಳುತ್ತಾರೆ.
Advertisement
Advertisement
ನಾನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿರುವುದರಿಂದ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕ ಮಾಡಲು ಆಗುತ್ತಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ 1,500ಕ್ಕೂ ಹೆಚ್ಚು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೊಮ್ಮೆ ನನಗೆ ಸೋಂಕು ಇಲ್ಲದಿದ್ದರೂ ಇಲ್ಲಿ ಒಂದೇ ಬಾತ್ ರೂಂ ಬಳಕೆ ಮಾಡುವುದರಿಂದ ಸೋಂಕು ಹರಡುವ ಭಯವಿದೆ. ಮನೆಯಲ್ಲಿ 6 ತಿಂಗಳ ಗರ್ಭಿಣಿ ಪತ್ನಿ ಇದ್ದು, ಆಕೆಯೂ ಇದರಿಂದ ಸಾಕಷ್ಟು ನೊಂದಿದ್ದಾರೆ. ದಯವಿಟ್ಟು ನನ್ನ ಸಮಸ್ಯೆಯನ್ನ ಬಗೆಹರಿಸಿ ಎಂದು ಯುವಕ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.