ಶಿವಮೊಗ್ಗ: ರೌಡಿಶೀಟರ್ ಶಾರೂಖ್ ಖಾನ್‍ನನ್ನು ಕೊಲೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ಭದ್ರಾವತಿ ಹೊಸಮನೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಹೊಸಮನೆಯ ಹನುಮಂತನಗರದ ನಿವಾಸಿ ರಮೇಶ್ (44), ವೆಂಕಟರಾಮ (35), ಚಂದ್ರ (37) ಹಾಗೂ ಸತ್ಯಸಾಯಿನಗರದ ಮಾರಿಯಮ್ಮ ಬೀದಿಯ ನಿವಾಸಿಗಳಾದ ಕಾರ್ತಿಕ್ (24) ಮಧುಸೂಧನ್ (28) ಹಾಗೂ ಕೆಳವಿ ರಮೇಶ್ (37) ಎಂದು ಗುರುತಿಸಲಾಗಿದೆ.
ಜಿಲ್ಲೆಯ ಭದ್ರಾವತಿ ಮಸೀದಿ ಬಳಿ ಇದೇ ಅಕ್ಟೋಬರ್ 1 ರಂದು ರೌಡಿ ಶೀಟರ್ ಶಾರೂಖ್ ಖಾನ್ ಕೊಲೆ ನಡೆದಿತ್ತು. ಶಾರೂಖ್ ಖಾನ್ ಸೆ.30 ರಂದು ರಾತ್ರಿ ಸುಮಾರು 11.30ಕ್ಕೆ ಮನೆಯಿಂದ ಬೈಕ್ ತೆಗೆದುಕೊಂಡು ಹೋಗಿದ್ದನು. ಆದರೆ ಮರುದಿನ ಹೊಸಮನೆಯ ನೂರಾನಿ ಮಸೀದಿ ಬಳಿ ಕೊಲೆಯಾಗಿದ್ದ. ಈ ಕುರಿತು ಆತನ ತಂದೆ ಹೊಸಮನೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ಹೊಸಮನೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.