ಶಿವಮೊಗ್ಗ: ಶಾಂತವಾಗಿದ್ದ ಮಲೆನಾಡಿನ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರನ್ನು ಕಂಡರೆ ಕಳ್ಳ-ಕಾಕರಿಗೆ, ಕೊಲೆಗಾರರಿಗೆ ಭಯವೇ ಇಲ್ಲದಂತಾಗಿದೆ. ಅಪರಾಧ ತಡೆಗಟ್ಟುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿರುವ ಸಚಿವ ಈಶ್ವರಪ್ಪ ಪೊಲೀಸರ ವಿರುದ್ಧ ಇಂದು ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ.
ಶಿವಮೊಗ್ಗ ನಗರದ ಕುವೆಂಪುನಗರ ಬಡಾವಣೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಮಾತನಾಡಿದ ಸಚಿವರು, ಈ ಹಿಂದೆ ಆನಂದರಾಯರು ಶಿವಮೊಗ್ಗ ಕ್ಷೇತ್ರದ ಶಾಸಕರಾಗಿದ್ದ ವೇಳೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ನಂತರದ ದಿನಗಳಲ್ಲಿ ಅಪರಾಧ ಪ್ರಕರಣಗಳ ಕಡಿಮೆ ಆಗಿದ್ದವು. ಆದರೆ ಇದೀಗ ಮತ್ತೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
Advertisement
Advertisement
ಶಿವಮೊಗ್ಗ ನಗರದಲ್ಲಿ ರೌಡಿಗಳು ಮಚ್ಚು, ಲಾಂಗ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಗಾಂಜಾ, ಹುಕ್ಕಾ ಸೇವನೆ ಹೆಚ್ಚಾಗಿರುವ ಜೊತೆಗೆ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಹೀಗಿದ್ದರೂ ಪೊಲೀಸರು ಅಪರಾಧ ತಡೆಗಟ್ಟಲು, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇರದಿಂದಾಗಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಪೊಲೀಸರು ಕೆಲಸ ಮಾಡುತ್ತಿದ್ದಾರಾ, ಮಲಗಿದ್ದೀರಾ ಎಂಬುದು ಗೊತ್ತಾಗುತ್ತಿಲ್ಲ. ನಿಮ್ಮ ಧೋರಣೆ ಹೀಗೆ ಮುಂದುವರಿದರೆ ಜನರೇ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎಂದು ಗುಡುಗಿದರು.
Advertisement
Advertisement
ನಾಗರಿಕರು ದೂರು ನೀಡಲು ಠಾಣೆಗೆ ಹೋದರೆ ವಿನಾಃ ಕಾರಣ ಕಾಯಿಸುತ್ತಾರೆ ಎಂಬ ಆರೋಪ ಸಹ ಪೊಲೀಸರ ಮೇಲಿದೆ. ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿದೆ. ನಿಮ್ಮ ಇಲಾಖೆ ಬಗ್ಗೆ ಪ್ರತ್ಯೇಕ ಸಭೆ ನಡೆಸುತ್ತೇನೆ. ನಿಮ್ಮಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದು ನನಗೆ ಗೊತ್ತಿದೆ ಎಂದು ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.