– 18 ತಿಂಗಳ, 5 ವರ್ಷದ ಕಂದಮ್ಮಗಳನ್ನು ಬಿಟ್ಟು ಬಂದ ತಾಯಿಯ ಕಥೆ
– 263 ಪ್ರಯಾಣಿಕರನ್ನು ರಕ್ಷಣೆ
– ರಕ್ಷಣಾ ವಿಮಾನದ ಮೊದಲ ಮಹಿಳಾ ಪೈಲೆಟ್
ನವದೆಹಲಿ: ತನ್ನ ಕುಟುಂಬ, ಮಕ್ಕಳನ್ನೂ ಲೆಕ್ಕಿಸದೆ ರೋಮ್‍ನಲ್ಲಿ ಸಿಲುಕಿದ್ದ 263 ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸುವ ಮೂಲಕ ಏರ್ ಇಂಡಿಯಾ ಮಹಿಳಾ ಪೈಲೆಟ್ ಸ್ವಾತಿ ರಾವಲ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ ರಕ್ಷಣಾ ವಿಮಾನದ ಮೊದಲ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಎಂತಹ ಕಠಿಣ ಪರಿಸ್ಥಿತಿಯಲ್ಲಿ ಪ್ರಯಾಣಿಕರನ್ನು ರಕ್ಷಿಸದರು ಎಂಬ ಕುರಿತು ಇದೀಗ ಅವರು ಮಾತನಾಡಿದ್ದಾರೆ.
ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಏರ್ ಇಂಡಿಯಾ ಪೈಲಟ್‍ಗಳು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸುತ್ತಿದ್ದು, ಇದಕ್ಕಾಗಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವಾತಿ ರಾವಲ್ ಅವರು ಏರ್ ಇಂಡಿಯಾದ 777 ವಿಮಾನದ ಪೈಲಟ್ ಆಗಿದ್ದು, ರೋಮ್‍ನಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿದ್ದಾರೆ. ಅಲ್ಲದೆ ರಕ್ಷಣಾ ವಿಮಾನದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಯೂ ಸ್ವಾತಿ ರಾವಲ್ ಅವರದ್ದಾಗಿದೆ.
ಹ್ಯೂಮನ್ಸ್ ಆಫ್ ಬಾಂಬೆಯ ಸಂವಾದದಲ್ಲಿ ಕ್ಯಾಪ್ಟನ್ ಸ್ವಾತಿ ಅವರು ಪ್ರಯಾಣಿಕರನ್ನು ಕರೆ ತಂದ ಸಂದರ್ಭದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಮಾರ್ಚ್ 20ರಂದು ನನ್ನ ತಂಡದಿಂದ ಕರೆ ಬಂತು. ರೋಮ್‍ನಲ್ಲಿ ಸಿಲುಕಿರುವ ಭಾರತೀಯರನ್ನು ದೆಹಲಿಗೆ ಕರೆ ತರಬೇಕು. ಈ ವಿಮಾನಕ್ಕೆ ನೀವೇ ಪೈಲೆಟ್ ಆಗಬೇಕು, ನಾಳೆಯೇ ಹೊರಡಬೇಕು ಎಂದರು. ನನ್ನ 18 ತಿಂಗಳ ಮಗಳು ಹಾಗೂ 5 ವರ್ಷದ ಮಗನನ್ನು ಲೆಕ್ಕಿಸದೆ, ಕೆಲಸಕ್ಕೆ ಬರುತ್ತೇನೆ ಎಂದು ತಿಳಿಸಿದೆ. ಈ ವೇಳೆ ನನ್ನ ಮಗಳಿಗೆ ಅನಾರೋಗ್ಯ ಸಹ ಉಂಟಾಗಿತ್ತು. ಆದರೆ 263 ಜನ ತಮ್ಮ ಮನೆಗೆ ಮರಳಲು ಕಾಯುತ್ತಿರುವುದು ನನ್ನ ಕಣ್ಣ ಮುಂದೆ ಬಂತು. ಹೀಗಾಗಿ ಕೆಲಸಕ್ಕೆ ಮರಳಲು ಒಪ್ಪಿಕೊಂಡೆ. ಮರುದಿನವೇ ನನ್ನ ಮಕ್ಕಳಿಗೆ ಮುತ್ತು ಕೊಟ್ಟು, ಕೆಲಸಕ್ಕೆ ಹಾಜರಾದೆ. ನಂತರ ಮಾರ್ಚ್ 22ರಂದು ಅವರನ್ನು ದೆಹಲಿಗೆ ತಲುಪಿದೆವು ಎಂದು ತಮ್ಮ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.
ಸಿಬ್ಬಂದಿ ಮತ್ತು ನಾನು ವಿಮಾನ ಹತ್ತಿದಾಗ ಯಾರೂ ಇರಲಿಲ್ಲ. 8 ಗಂಟೆಗಳ ಕಾಲ ಮೌನ ಆವರಿಸಿತ್ತು. ನಂತರ ರೋಮ್‍ನಲ್ಲಿದ್ದ ಪ್ರಯಾಣಿಕರು ಹತ್ತಿದ ನಂತರ ವಾತಾವರಣವೇ ಬದಲಾಯಿತು. ಇದು ನನಗೆ ಅತ್ಯಂತ ಕಠಿಣ ಸಂಜೆಯಾಗಿತ್ತು. ಆಗಲೇ ಕೊರೊನಾ ಹೆಚ್ಚು ದಿನ ಇರುವುದಿಲ್ಲ ಎಂದು ಭಾವಿಸಿದೆ. ನಂತರ ವಿಮಾನ ರೋಮ್ ಬಿಡುವುದಕ್ಕೂ ಮೊದಲು ಪ್ರಯಾಣಿಕರ್ ಚಿಯರ್ ಮಾಡಿದರು. ಅಷ್ಟು ಸಂತಸ ಅವರ ಮೊಗದಲ್ಲಿತ್ತು ಎಂದು ಹೇಳಿದ್ದಾರೆ.
ಈ ರಕ್ಷಣಾ ಮಿಷನ್ ಬಳಿಕ ಮನೆಗೆ ತೆರಳಿದ ಮೇಲೆ ತುಂಬಾ ವಿಭಿನ್ನ ಕಷ್ಟ ಅನುಭವಿಸಬೇಕಾಯಿತು. ಏಕೆಂದರೆ 14 ದಿನಗಳ ಕಾಲ ಸ್ವಯಂ ದಿಗ್ಬಂಧನದಲ್ಲಿರಬೇಕಾಯಿತು. ನಾನು ಮನೆಗೆ ತೆರಳಿದ ತಕ್ಷಣ ಮಗ ಓಡಿ ಬಂದು ತಬ್ಬಿಕೊಳ್ಳಲು ಯತ್ನಿಸಿದ. ಆದರೆ ನಾನು ತಡೆದೆ. ಮಗಳು ನನ್ನನ್ನು ನೋಡಿದಾಗಲೆಲ್ಲ ನಗುತ್ತಿದ್ದಳು, ನನ್ನ ಬಳಿ ಬರಲು ಯತ್ನಿಸುತ್ತಿದ್ದಳು. ಆಗ ನನ್ನ ಪತಿ ಅವಳನ್ನು ಎಳೆದೊಯ್ಯುತ್ತಿದ್ದರು. ಆಗ ಅವಳು ತುಂಬಾ ಅಳುತ್ತಿದ್ದಳು, ನನ್ನ ಹೃದಯವೇ ಒಡೆದಂತಾಗುತ್ತಿತ್ತು ಎಂದು ತಮ್ಮ ಸಂದಿಗ್ದ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.
ಮಕ್ಕಳ ಬಳಿ ತೆರಳಲು ನಾನು 14 ದಿನ ಸ್ವಯಂ ದಿಗ್ಬಂಧನ ಪೂರ್ಣಗೊಳಿಸಬೇಕಾಯಿತು. ಈ ದಿನಗಳಲ್ಲಿ ಮಗಳು ನನ್ನ ಬಿಟ್ಟು ಇರುತ್ತಿರಲಿಲ್ಲ ತುಂಬಾ ಅಳುತ್ತಿದ್ದಳು. ನನ್ನ ರೂಮ್ ಬಳಿ ಬರುತ್ತಿದ್ದಳು. ನನ್ನನ್ನು ಹಿಡಿಯಲು ಯತ್ನಿಸುತ್ತಿದ್ದಳು. ಕೊನೆಗೂ ಐಸೋಲೇಶನ್ ಮುಗಿಸಿ ನನ್ನ ಮಕ್ಕಳ ಬಳಿ ತೆರಳಿದೆ. ಇದೇ ರೀತಿ ತಮ್ಮ ಕುಟುಂಬದಿಂದ ದೂರ ಉಳಿದ ಪ್ರಯಾಣಿಕರಿಗೂ ಆಗಿರುತ್ತದೆ. ತಮ್ಮ ಪ್ರೀತಿ ಪಾತ್ರರಿಂದ ದೂರ ಇರುತ್ತಾರೆ. ಹೀಗಾಗಿ ಕೆಲಸಕ್ಕೆ ಹಾಜರಾದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಾಕ್‍ಡೌನ್ ಹಿನ್ನೆಲೆ ವಿದೇಶ ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ವಿವಿಧ ದೇಶಗಳಲ್ಲಿ ಭಾರತೀಯರು ಸಂಕಷ್ಟದಲ್ಲಿದ್ದರು. ಹೀಗಾಗಿ ಒಂದೇ ಭಾರತ್ ಮಿಷನ್ ಮೂಲಕ ವಿದೇಶದಲ್ಲಿ ಸಿಲುಕಿರುವ ಭಾರತಿಯರನ್ನು ಕರೆ ತರಲಾಗುತ್ತಿದೆ.