ರೈತ ಹೋರಾಟಗಾರರಿಂದ ಇಂದು ಕರಾಳ ದಿನ ಆಚರಣೆ

Public TV
1 Min Read
formers protest 1

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಇಂದು 6 ತಿಂಗಳು ಪೂರ್ಣವಾಗುವ ಹಿನ್ನೆಲೆ ರೈತ ಹೋರಾಟಗಾರರು ಇಂದು ಕರಾಳ ದಿನ ಆಚರಣೆ ಮಾಡಿದ್ದಾರೆ.

ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಇಂದು 6 ತಿಂಗಳು ಪೂರ್ಣಗೊಂಡ ಕಾರಣ ಇಂದು ರೈತರು ತಮ್ಮ ಮನೆಗಳಲ್ಲಿ, ವಾಹನಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ಕಪ್ಪು ಬಾವುಟ ಹಾರಿಸಲು ನಿರ್ಧಾರ ಮಾಡಿದ್ದಾರೆ. ಇದರೊಂದಿಗೆ ಪಂಜಾಬ್‍ನ ರೈತರು ಕಪ್ಪು ಬಣ್ಣದ ಟರ್ಬನ್‍ಗಳನ್ನು ಧರಿಸುವ ಮೂಲಕ ಕರಾಳ ದಿನ ಆಚರಣೆಗೆ ಬೆಂಬಲ ಸೂಚಿಸುತ್ತಿದ್ದಾರೆ. 2020ರ ನವೆಂಬರ್ 26ರಂದು ದೆಹಲಿ ಚಲೋ ಹೆಸರಿನಲ್ಲಿ ಹೋರಾಟ ಆರಂಭಿಸಿದ್ದ ರೈತರು, ದೆಹಲಿ ಪ್ರವೇಶಕ್ಕೆ ಅನುಮತಿ ಸಿಗದ ಹಿನ್ನಲೆಯಲ್ಲಿ ಗಡಿಗಳಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಸತತವಾಗಿ 6 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ಕೇಂದ್ರದ 3 ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಪಟ್ಟುಹಿಡಿದಿದ್ದಾರೆ.

ಈ ನಡುವೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳು ಕೂಡ ವಿಫಲವಾಗಿದೆ. ಹಾಗಾಗಿ ಇಂದಿನಿಂದ ಕರಾಳ ದಿನ ಆಚರಿಸಲು ರೈತ ಸಂಘಟನೆಗಳು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಕೊರೊನಾ ನಡುವೆಯೂ ದೆಹಲಿ ಗಡಿಯಲ್ಲಿ ಕಪ್ಪು ಬಾವುಟ ಹಿಡಿದು ರೈತರು ಹೋರಾಟ ಮುಂದುವರಿಸಿದ್ದಾರೆ. ಇತ್ತ ಪೊಲೀಸರು ಕೂಡ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಭಾಗದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *