ಬೆಂಗಳೂರು: ಸೆಪ್ಟೆಂಬರ್ 25ರಂದು ಕರ್ನಾಟಕವೇ ಬಂದ್ ಆಗುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಬಂದ್ ಆಚರಿಸುವ ನಿರೀಕ್ಷೆ ಇದೆ.
ಈ ಸಂಬಂಧ ಇವತ್ತು ಬೆಳಗ್ಗೆ 11 ಗಂಟೆಗೆ ಅಧಿಕೃತ ಘೋಷಣೆ ಆಗಲಿದೆ. ಬಂದ್‍ಗೆ 32ಕ್ಕೂ ಹೆಚ್ಚು ಸಂಘಟನೆಗಳು ಕೈಜೋಡಿಸಲಿವೆ. ರೈತ ಸಂಘಟನೆಗಳು ಮಾತ್ರವಲ್ಲದೇ ನಾರಾಯಣಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ-ಉಬರ್, ಆಟೋ, ಟ್ಯಾಕ್ಸಿ ಸಂಘಟನೆಗಳು ಬೆಂಬಲ ಘೋಷಿಸಲಿವೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನ ಬಂದ್ ಮಾಡಿ ಪ್ರತಿಭಟಿಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.
Advertisement
Advertisement
ಬೆಂಗಳೂರಲ್ಲಿ ನಡೆಯುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮತ್ತು ಮೌರ್ಯ ಸರ್ಕಲ್ ಎದುರು ರೈತರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ನಿನ್ನೆಯಿಂದ ವಿಧಾನಮಂಡಲದ ಅಧಿವೇಶನ ಆರಂಭ ಆಗಿದ್ದು, ಅಧಿವೇಶನದ ಮೊದಲ ದಿನವೇ ರಾಜಧಾನಿಯಲ್ಲಿ ರೈತರು ಹೋರಾಟಕ್ಕಿಳಿದಿದ್ದರು. ಈ ವೇಳೆ ಮಾತನಾಡಿದ್ದ ಕುರುಬೂರು ಶಾಂತಕುಮಾರ್, ಭೂಮಿ ತಾಯಿ ಮಾರಾಟಕ್ಕೆ ಮುಂದಾದ ಸರ್ಕಾರಕ್ಕೆ ತಕ್ಕ ಪಾಠ ಕಲಿಸ್ತೇವೆ. ದೇಶಾದ್ಯಂತ ರೈತರು ದಂಗೆ ಏಳುವ ಮುನ್ನ ಎಚ್ಚೆತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಇದು ರೈತ ವಿರೋಧಿ ಕೆಲಸ. ರೈತನ ಮಗನಾಗಿದ್ದರೇ ಈ ರೀತಿ ಮಾಡುತ್ತಿರಲಿಲ್ಲ. ಮೋದಿ ಮಾತನ್ನು ಯಾರು ನಂಬಬೇಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದರು.
Advertisement
Advertisement
ಕೃಷಿ ಬಿಲ್ ವಿರೋಧಿಸಿ ಪಂಜಾಬ್‍ನಲ್ಲಿ ಸೆಪ್ಟೆಂಬರ್ 25ಕ್ಕೆ ಬಂದ್‍ಗೆ ಕರೆ ನೀಡಲಾಗಿದೆ. ಇದನ್ನು ಅಖಿಲ ಭಾರತ ಮಟ್ಟದಲ್ಲಿ ಮಾಡಲು ಕಿಸಾನ್ ಸಭಾ ಚಿಂತನೆ ನಡೆಸುತ್ತಿದೆ. ಇದರ ನಡುವೆಯೇ ಕೃಷಿ ಮಸೂದೆ ಸಂಬಂಧ ಪ್ರಧಾನಿ ಮೋದಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ರೈತರ ಶ್ರೇಯಸ್ಸಿಗಾಗಿಯೇ ಕೃಷಿ ಬಿಲ್ ತರಲಾಗುತ್ತಿದೆ. ಆದರೆ ಈ ಬಗ್ಗೆ ವಿಪಕ್ಷಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿದ್ದರು. ಕೃಷಿ ಮಸೂದೆಗಳು ಯಾವುದೇ ಕಾರಣಕ್ಕೂ ರೈತ ವಿರೋಧಿ ಅಲ್ಲ. ಇವುಗಳಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಲಿವೆ. ಈ ಮಸೂದೆಗಳಿಂದಾಗಿ ಬೆಳೆಗಳಿಗೆ ಬೆಂಬಲ ಬೆಲೆಯೂ ರದ್ದಾಗಲ್ಲ. ಬೆಂಬಲ ಬೆಲೆ ಮುಂದುವರೆಯಲಿದೆ ಎಂದು ಈ ಮೂಲಕ ರೈತರಿಗೆ ಭರವಸೆ ನೀಡುತ್ತಿದ್ದೇನೆ. ನೂತನ ಕೃಷಿ ಮಸೂದೆಯಿಂದಾಗಿ ರೈತರು ಎಲ್ಲಿ ಬೇಕಾದ್ರೂ ತಮ್ಮ ಉತ್ಪನ್ನಗಳನ್ನು ಮಾರಬಹುದು. ದೇಶದ ಯಾವುದೇ ಮಂಡಿಯನ್ನು ಮುಚ್ಚುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದರು.