– ರೈತರಿಗೆ ಸಿಎಂ ಬಿಎಸ್‍ವೈ ಸರ್ಕಾರದ ಸೆಡ್ಡು
ಬೆಂಗಳೂರು: ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಇವತ್ತು ರೈತರು ರಾಜ್ಯಾದ್ಯಂತ ರಸ್ತೆಗಳನ್ನು ಬಂದ್ ಮಾಡ್ತಿರೋ ಹೊತ್ತಲ್ಲೇ ಸರ್ಕಾರ ರೈತರಿಗೆ ಸೆಡ್ಡು ಹೊಡೆದಿದೆ. ರೈತ ವಿರೋಧಿ ಎಪಿಎಂಸಿ ತಿದ್ದುಪಡಿ ಮಸೂದೆ ಮತ್ತು ಭೂಸುಧಾರಣೆ ಮಸೂದೆಯನ್ನು ವಿಧಾನಸಭೆಯಲ್ಲಿ ಇವತ್ತು ಸರ್ಕಾರ ಮಂಡನೆ ಮಾಡಲಿದೆ.
ಮಸೂದೆಗೆ ತೀವ್ರ ವಿರೋಧ ಕೇಳಿಬಂದಿರೋ ಹಿನ್ನೆಲೆಯಲ್ಲಿ ಕೆಳಮನೆ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಡುವೆ ವಾಕ್ಸಮರಕ್ಕೆ ಸಾಕ್ಷಿ ಆಗಲಿದೆ. ಈ ಹಿನ್ನೆಲೆಯಲ್ಲಿ ತನ್ನ ಶಾಸಕರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಬಿಜೆಪಿ ವಿಪ್ ಜಾರಿ ಮಾಡಿದೆ.
ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದೆ. ಇದಕ್ಕೆ ಕಾಂಗ್ರೆಸ್‍ನ 23 ಶಾಸಕರು ಎದ್ದು ನಿಂತು ಬೆಂಬಲ ಸೂಚಿಸಿದರು. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡನೆಗೆ ಕೋರಂ ಇದೆ ಎಂದ ಸ್ಪೀಕರ್ ಕಾಗೇರಿ, ಇಂದು ಅಥವಾ ನಾಳೆ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಯಾವುದೇ ಬಿಲ್ ಪಾಸ್ ಮಾಡದಂತೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.