ಚಿತ್ರದುರ್ಗ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಯಾಗಿದ್ದು, ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ 68 ವರ್ಷದ ಎಸ್.ವಿ.ಸುಮಂಗಲಮ್ಮ ಅವರ ಕೃಷಿ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಸುಮಂಗಲಮ್ಮನವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಭಿನಂದಿಸಿದ್ದಾರೆ.
ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಗತಿಪರ ಕೃಷಿಕರಾದ ಬಿಜಿ ಕೆರೆ ಗ್ರಾಮದ ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಖುಷಿ ನೀಡಿದೆ. ಅವರಿಗೆ ಅಭಿನಂದಿಸುತ್ತ, ಇದೇ ರೀತಿ ಕೃಷಿಯಲ್ಲಿ ಯುವ ಜನತೆ ಆಸಕ್ತಿ ಬೆಳೆಸಿಕೊಳ್ಳುವಂತಹ ಕೆಲಸಗಳು ಅವರಿಂದ ಹೆಚ್ಚಾಗಲಿ ಎಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಗತಿಪರ ಕೃಷಿಕರಾದ ಬಿ ಜಿ ಕೆರೆ ಗ್ರಾಮದ ಶ್ರೀಮತಿ ಎಸ್ ವಿ ಸುಮಂಗಲಮ್ಮ ವೀರಭದ್ರಪ್ಪ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಖುಷಿ ನೀಡಿದೆ.
ಅವರಿಗೆ ಅಭಿನಂದಿಸುತ್ತ, ಇದೇ ರೀತಿ ಕೃಷಿಯಲ್ಲಿ ಯುವ ಜನತೆ ಆಸಕ್ತಿ ಬೆಳೆಸಿಕೊಳ್ಳುವಂತಹ ಕೆಲಸಗಳು ಅವರಿಂದ ಹೆಚ್ಚಾಗಲಿ ಎಂದು ಆಶಿಸುತ್ತೇನೆ. pic.twitter.com/Zq5UUhcIn3
— B Sriramulu (@sriramulubjp) October 28, 2020
ಹಿಂದುಳಿದ ಮತ್ತು ಹೆಚ್ಚು ಬರಪೀಡಿತ ಪ್ರದೇಶವಾದ ಬಿಜಿ ಕೆರೆ ಗ್ರಾಮ ಬಳ್ಳಾರಿಯಿಂದ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತದೆ. ಸುಮಂಗಲಮ್ಮ ನವರ ‘ವಸುಂಧರ ಕೃಷಿ ಕ್ಷೇತ್ರವು’ ಸುಮಾರು 80 ಎಕರೆ ಕೃಷಿ ಪ್ರದೇಶದಲ್ಲಿ 20 ರೀತಿಯ ವಿವಿಧ ಸಸ್ಯವರ್ಗದ ತಳಿಗಳೊಂದಿಗೆ ಕೃಷಿ ತೋಟವಾಗಿದೆ. ಇಲ್ಲಿ ತೆಂಗು, ಹುಣಸೆ ಮರಗಳು, ರೇಷ್ಮೆ ಮತ್ತು ರೇಷ್ಮೆ ಹುಳುಗಳ ಸಾಕಾಣಿಕೆ ಹಾಗೂ ಕೃಷಿ ಅರಣ್ಯ ಬೆಳೆಗಳಾದ ಗ್ಲೈರಿಸಿಡಿಯಾ, ಸೂಬಾಬುಲ್, ಹೆಬ್ಬೇವು, ಶ್ರೀಗಂಧ, ಬಿದಿರು, ಮುಂತಾದ ಮರಗಳನ್ನು ಬೆಳೆದಿದ್ದಾರೆ.
ಇವರು 60ಕ್ಕೂ ಹೆಚ್ಚು ಸ್ಥಳೀಯ ಕೃಷಿ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಅಲ್ಲದೆ ಸುಮಂಗಲಮ್ಮ ಅವರು ಕಳೆದ 40 ವರ್ಷಗಳಿಂದ ಎಲ್ಲ ವಿಧದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ‘ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆಯಲ್ಲಿ ಪರವಾನಿಗೆ ಪಡೆದ ಪ್ರಥಮ ಮಹಿಳೆ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇವರಿಗೆ ಆಸ್ಪಿ ಎಲ್.ಎಮ್. ಪಟೇಲ್ ಸಂಸ್ಥೆಯಿಂದ 2010ನೇ ಸಾಲಿನ ‘ಅತ್ಯುತ್ತಮ ರೇಷ್ಮೆ ಬೆಳೆಗಾರ’ ರಾಷ್ಟ್ರೀಯ ಪುರಸ್ಕೃತ ಪ್ರಶಸ್ತಿ ಬಂದಿದ್ದು, ರೇಷ್ಮೆ ಬೆಳೆ ಅಭಿವೃದ್ಧಿಯಲ್ಲಿ ಕೇಂದ್ರಿಯ ರೇಷ್ಮೆ ಮಂಡಳಿ ನೀಡುವ 1995- 96 ನೇ ಸಾಲಿನ ಉತ್ತಮ ಮಹಿಳಾ ಉದ್ಯಮಶೀಲತೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕೋಟೆನಾಡಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಸಮುದಾಯಕ್ಕೆ ಉತ್ತಮ ಪ್ರೇರಕರಾಗಿ ಆಯ್ಕೆಯಾಗಿರುತ್ತಾರೆ. 2007-08 ನೇ ಸಾಲಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಿಂದ ರೈತರ ಒಕ್ಕೂಟದ ಅಭಿವೃದ್ಧಿಗೆ ಉತ್ತಮ ಸಾಧನೆ ಪ್ರಶಸ್ತಿ ಪಡೆದ್ದಾರೆ. ಹೀಗಾಗಿ ಇವರ ಕುಟುಂಬವನ್ನು ‘ಕೃಷಿ ವಿಜ್ಞಾನ ಪದವೀಧರರ ಕುಟುಂಬ’ ಎನ್ನಲಾಗುತ್ತದೆ. ಇವರ ಅಪಾರ ಸಾಧನೆ ಪರಿಗಣಿಸಿ ಸರ್ಕಾರ ಇದೀಗ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.