ಬೆಂಗಳೂರು: ಕೊರೊನಾ ಕೋಟ್ಯಂತರ ಸಮಸ್ಯೆಗಳನ್ನು ತಂದೊಡ್ಡಿ, ಇದೀಗ ಚೇತರಿಕೆ ಕಾಣುತ್ತಿರುವಾಗ ರಾಜ್ಯದ ರೈತರಿಗೆ ಸಿಹಿ ಸುದ್ದಿಯೊಂದು ಬಂದರೆ ಇತ್ತ ಗ್ರಾಹಕರಿಗೆ ಇದು ಶಾಕಿಂಗ್ ನ್ಯೂಸ್ ಆಗಿ ಪರಿಣಮಿಸಿದೆ.
ಬಮೂಲ್ ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಸಿಹಿ ನೀಡಿದೆ. ಪ್ರತಿ ಲೀ. ಹಾಲಿಗೆ ರೈತರಿಗೆ ನೀಡುತ್ತಿದ್ದ ಹಣವನ್ನು 2 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ಧಾರ ಎಂದು ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಖರೀದಿ ಬೆಲೆ 2 ರೂ ಕಡಿಮೆ ಮಾಡಲಾಗಿತ್ತು. ಇದೀಗ ಮತ್ತೆ 2 ರೂ ಹೆಚ್ಚಳ ಮಾಡಲಾಗಿದೆ. ಬಮೂಲ್‍ಗೆ ಪ್ರತಿದಿನ 17.2 ಲಕ್ಷ ಲೀ. ಹಾಲು ಮಾರಾಟವಾಗುತ್ತಿದೆ. 2209 ಹಾಲು ಉತ್ಪಾದಕ ಪ್ರಾಥಮಿಕ ಕೇಂದ್ರ ಸಂಘಗಳು, 1,24,600 ಉತ್ಪಾದಕರು ಬಮೂಲ್‍ನಡಿಯಲ್ಲಿದ್ದಾರೆ.
ಲಾಕ್ ಡೌನ್ ಮುನ್ನ 19 ಲಕ್ಷ ಲೀಟರ್ ಹಾಲು ಬಮೂಲ್‍ನಲ್ಲಿ ಮಾರಾಟವಾಗುತ್ತಿತ್ತು. ಲಾಕ್ ಡೌನ್ ವೇಳೆ 7 ಲಕ್ಷ ಲೀಟರ್ ಮಾರಾಟ ಕುಸಿತ ಕಂಡಿತು. ಆಗ ರೈತರಿಗೆ 2 ರೂ ಖರೀದಿ ದರ ಕಡಿತ ಮಾಡಲಾಗಿತ್ತು. ಈಗ ಮತ್ತೆ ಲಾಭದತ್ತ ನಡೆಯುತ್ತಿದ್ದು ರೈತರಿಗೆ ಮತ್ತೆ ಬೆಲೆ ಹೆಚ್ಚಿಸಿ ಸಿಹಿ ನೀಡಲು ತಯಾರಿ ನಡೆಸುತ್ತಿದೆ.
ಇತ್ತ ರೈತರಿಗೆ ಸಿಹಿಯಾದರೇ ಅತ್ತ ಗ್ರಾಹಕರಿಗೆ ಇದು ಹೊರೆಯಾಗುವ ಎಲ್ಲಾ ಲಕ್ಷಣಗಳಿದ್ದು, ಹಾಲಿನ ಮಾರಾಟ ದರದಲ್ಲಿ 5 ರೂ. ಹೆಚ್ಚಳಕ್ಕೆ ಬಮೂಲ್ ಕೆಎಂಎಫ್‍ಗೆ ಮನವಿ ಮಾಡಿಕೊಂಡಿದೆ.