ರೈತರಿಗೆ ಪರಿಹಾರ ನೀಡಿದ ನಂತರ ನಿವೇಶನ ಹಂಚಿಕೆ: ವಿಶ್ವನಾಥ್

Public TV
2 Min Read
S R Vishwanath 2

ಬೆಂಗಳೂರು: ಉದ್ದೇಶಿತ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡಿದ ನಂತರವೇ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದ್ದಾರೆ.

S R Vishwanath2 medium

ಬ್ಯಾಟರಾಯನಪುರದಲ್ಲಿ ತಮ್ಮೇಶ್ ಗೌಡ ನೇತೃತ್ವದ ಕೇಸರಿ ಫೌಂಡೇಶನ್ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಈ ಉದ್ದೇಶಿತ ಬಡಾವಣೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ನಿವೃತ್ತ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಈ ಸಮಿತಿ ನೀಡುವ ಮಾರ್ಗದರ್ಶನದಡಿಯಲ್ಲಿ ಬಿಡಿಎ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದರು. ಇದನ್ನೂ ಓದಿ: RSS ಪ್ರಮುಖರ ಮನೆ ಕದ ತಟ್ಟಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಹಿರಿಯರಾಗಿರುವ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಅವರ ಕಾಲದಲ್ಲಿಯೇ ಈ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು. ಆದರೆ, ಏಕೆ ಮಾಡಲಿಲ್ಲ? ಸಮಸ್ಯೆಯ ಗಂಭೀರತೆಯ ಬಗ್ಗೆ ಅವರಿಗೆ ಅರಿವಿದೆ. ಆದಾಗ್ಯೂ, ಬಡಾವಣೆ ವಿಳಂಬವಾಗುತ್ತಿರುವುದರ ಬಗ್ಗೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಸುಪ್ರೀಂಕೋರ್ಟ್ ಮಾರ್ಗಸೂಚಿ ಮತ್ತು ನಿರ್ದೇಶನದಂತೆಯೇ ಈ ಬಡಾವಣೆಯನ್ನು ನಿರ್ಮಾಣ ಮಾಡಬೇಕಾಗಿದೆ. ಈ ವಿಚಾರದಲ್ಲಿ ಬಿಡಿಎ ಆಗಲೀ, ಸರ್ಕಾರ ಅಥವಾ ಮುಖ್ಯಮಂತ್ರಿಯಾಗಲೀ ಯಾರೂ ಸಹ ತಮ್ಮದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಾಗೊಂದು ವೇಳೆ ತಮ್ಮದೇ ನಿರ್ಧಾರ ಕೈಗೊಂಡರೆ ಅದು ನ್ಯಾಯಾಂಗ ನಿಂದನೆಯಾದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಡಿಎ ಮುನ್ನಡಿ ಇಡುತ್ತಿದ್ದು, ಈಗಾಗಲೇ 600 ಎಕರೆಯಷ್ಟು ಭೂಮಿಯನ್ನು ಅವಾರ್ಡ್ ಮಾಡಲಾಗಿದ್ದು, ಇನ್ನೂ ಸುಮಾರು ಸಾವಿರ ಎಕರೆಗೆ ಅವಾರ್ಡ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಡಾವಣೆಗೆ ಭೂಮಿ ನೀಡಿದ ರೈತರ ಹಿತವನ್ನು ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಈ ಸೂಚನೆಯನ್ನು ಬಿಡಿಎ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಭೂಮಿ ನೀಡಿರುವ ರೈತರಿಗೆ ಮೊದಲು ಪರಿಹಾರ ನೀಡಿದ ನಂತರವೇ ಸಾರ್ವಜನಿಕರಿಗೆ ನಿವೇಶನವನ್ನು ಹಂಚಿಕೆ ಮಾಡುತ್ತೇವೆ ಎಂದು ವಿಶ್ವನಾಥ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *