ಚಿಕ್ಕೋಡಿ/ಬೆಳಗಾವಿ: ಮಹಾಮಾರಿ ಕೊರೊನಾ ಲಾಕ್‍ಡೌನ್‍ನಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಬಡ ಜನರಿಗೆ ಹಾಗೂ ರೈತರಿಗೆ ಲಾಕ್‍ಡೌನ್‍ನಿಂದ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಶಾಸಕರೊಬ್ಬರು ರೈತರಿಂದ ತರಕಾರಿ ಖರೀದಿಸಿ ಬಡ ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಬಡ ಜನರಿಗೆ ಅನುಕೂಲ ಆಗಬೇಕು ಎನ್ನುವ ನಿಟ್ಟಿನಲ್ಲಿ ರೈತರು ಬೆಳೆದ ತರಕಾರಿಯನ್ನ ತಾವೇ ಖರೀದಿಸಿ ಬಡ ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ದಿನನಿತ್ಯ ತಮ್ಮ ಕ್ಷೇತ್ರದ ರೈತರನ್ನ ತಾವೇ ಖುದ್ದಾಗಿ ಭೇಟಿ ಆಗಿ ಅವರಿಂದ ಮಾರುಕಟ್ಟೆ ಬೆಲೆಯಲ್ಲಿ ತರಕಾರಿ ಖರೀದಿಸುತ್ತಿದ್ದಾರೆ. ನಂತರ ತಮ್ಮ 10 ಜನರ ಕಾರ್ಯಕರ್ತರ ಮೂಲಕ ಖರೀದಿಸಿದ ತರಕಾರಿಗಳನ್ನ ಪ್ಯಾಕ್ ಮಾಡಿಸುತ್ತಾರೆ.
ಬಳಿಕ ತಮ್ಮದೇ ವಾಹನದಲ್ಲಿ ಬಡ ಜನರು ಇರುವ ಏರಿಯಾಗಳಿಗೆ ಹೋಗಿ ತರಕಾರಿಯನ್ನ ತಲುಪಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಇದರಿಂದ ರೈತರೂ ಹಾಗು ಬಡ ಜನ ಇಬ್ಬರಿಗೂ ಅನಕೂಲವಾಗುತ್ತಿದೆ. ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುತ್ತಿದೆ.