ಹಾವೇರಿ: ಪದೇ ಪದೇ ನಷ್ಟಕ್ಕೆ ಒಳಗಾಗುತ್ತಿದ್ದ ರೈತನ ಬಾಳಿಗೆ ಸ್ವೀಟ್ ಕಾರ್ನ್ ಭರಪೂರ ಸಿಹಿಯನ್ನ ನೀಡಿದೆ. ಕೃಷಿ ಜೀವನವೇ ಸಾಕು ಅಂತ ನಿರ್ಧಾರಕ್ಕೆ ಬಂದಿದ್ದ ರೈತನ ಜೀವನಕ್ಕೆ ಸ್ವೀಟ್ ಕಾರ್ನ್ ಹೊಸ ಚೈತನ್ಯವನ್ನ ನೀಡಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ರೈತ ಪರಮೇಶ್ವರಪ್ಪ ಮಠದ ಸ್ವೀಟ್ ಕಾರ್ನ್ ಬೆಳೆದು ಲಾಭದ ಸಂಭ್ರಮದಲ್ಲಿದ್ದಾರೆ.
ಪರಮೇಶ್ವರಪ್ಪ ಕುಟುಂಬಕ್ಕೆ ಅಂತಾ ಒಟ್ಟು ಇಪ್ಪತ್ತು ಎಕರೆ ಜಮೀನಿದೆ. ಪ್ರತಿವರ್ಷ ಹತ್ತಿ, ಗೋವಿನ ಜೋಳವನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆತಿದ್ದರು. ಕಳೆದ ಕೆಲವು ವರ್ಷಗಳಿಂದ ಹತ್ತಿ ಬೆಳೆ ಪದೇ ಪದೇ ಹಾನಿಗೆ ಒಳಗಾಗುತ್ತಿತ್ತು. ಹತ್ತಿ ಬೆಳೆ ಬೆಳೆಯಲು ಮಾಡಿದ ಖರ್ಚು ಬರದ ಸ್ಥಿತಿ ಎದುರಾಗಿತ್ತು. ಇದರಿಂದ ಕಂಗಾಲಾಗಿದ್ದ ರೈತ ಪರಮೇಶ್ವರಪ್ಪ ಸಾಕಷ್ಟು ಜಮೀನಿದ್ರೂ ಕೃಷಿ ಜೀವನವೆ ಸಾಕು ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಆಗ ಕೃಷಿ ವಿಜ್ಞಾನಿ ಅಶೋಕ್ ಎಂಬವರು ಸಿಹಿ ಮೆಕ್ಕಜೋಳ ಬೆಳೆಯುವಂತೆ ಸಲಹೆ ನೀಡಿದ್ದರು. ಅದರಂತೆ ಕೇವಲ ಇಪ್ಪತ್ತು ಗುಂಟೆಯಲ್ಲಿ ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ ಸ್ವೀಟ್ ಕಾರ್ನ್ ಬೆಳೆದ ಪರಮೇಶ್ವರಪ್ಪ ಈಗ ಖರ್ಚಿಗಿಂತ ಆರು ಪಟ್ಟು ಲಾಭದ ಖುಷಿಯಲ್ಲಿದ್ದಾರೆ.
ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯ ಸಲಹೆ ಮೇರೆಗೆ ರೈತ ಪರಮೇಶ್ವರಪ್ಪ, ಥೈಲ್ಯಾಂಡ್ ನಿಂದ ಸಿಹಿ ಮೆಕ್ಕೆಜೋಳದ ಬೀಜ ತರಿಸಿ ಬಿತ್ತನೆ ಮಾಡಿದ್ದಾರೆ. ಕೇವಲ ಅರವತ್ತೈದು ದಿನಗಳಲ್ಲಿ ಫಸಲು ಬರೋ ಸ್ವೀಟ್ ಕಾರ್ನ್ ಬಿತ್ತನೆ ಮಾಡಿ ಬಂಪರ್ ಬೆಳೆ ತೆಗೆದಿದ್ದಾರೆ. ಬೆಂಗಳೂರಿಗೆ ಖಾಸಗಿ ಮಳಿಗೆಯೊಂದಕ್ಕೆ ಒಪ್ಪಂದ ಮಾಡ್ಕೊಂಡು ಈಗಾಗಲೇ ಸ್ವೀಟ್ ಕಾರ್ನ್ ಮಾರಾಟಕ್ಕೆ ಸಿದ್ಧವಾಗಿದೆ. ಏಳು ರುಪಾಯಿಗೊಂದು ತೆನೆಯಂತೆ ಖರೀದಿಗೆ ಮೆಕ್ಕೆಜೋಳ ರೆಡಿಯಾಗಿದೆ.
ಸುಮಾರು ಅರವತ್ತೈದು ಸಾವಿರ ರುಪಾಯಿ ಆದಾಯ ಬರ್ತಿದೆ. ಅದರಲ್ಲಿ ಹತ್ತು ಸಾವಿರ ರೂಪಾಯಿ ಖರ್ಚು ತೆಗೆದ್ರೆ ಆರು ಪಟ್ಟು ಹೆಚ್ಚಿನ ಆದಾಯ ಬರ್ತಿದೆ. ಪ್ರತಿ ವರ್ಷ ಹತ್ತಿ ಬೆಳೆ ಬೆಳೆದು ಬೆಳೆ ಹಾನಿ ಅನುಭವಿಸಿ, ಮಾಡಿದ ಖರ್ಚು ಬಾರದ ಸ್ಥಿತಿಗೆ ತಲುಪುತ್ತಿದ್ದ ರೈತ ಪರಮೇಶ್ವರಪ್ಪ ಕೇವಲ ಇಪ್ಪತ್ತು ಗುಂಟೆಯಲ್ಲಿ ಮಾಡಿದ ಖರ್ಚಿಗಿಂತ ಆರು ಪಟ್ಟು ಆದಾಯ ಪಡಿತಿರೋದು ರೈತನ ಕುಟುಂಬಕ್ಕೆ ಸಂತಸ ಮೂಡಿಸಿದೆ.