ಹಾಸನ: ರೇವಣ್ಣ ಹೇಳಿದ ಹಾಗೇ ಕೇಳಿಕೊಂಡು ಕುಳಿತುಕೊಳ್ಳುವುದಕ್ಕೆ ನಾನು ಬಾಂಗ್ಲಾ ಹಾಗೂ ನೇಪಾಳದಿಂದ ಬಂದಿಲ್ಲ ಶಾಸಕ ಪ್ರೀತಂಗೌಡ ಮಾಜಿ ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ವಿತರಿಸಿದ್ದ ಶಾಸಕ ಪ್ರೀತಂಗೌಡ ಅದರಲ್ಲಿ ತಮ್ಮ ಫೋಟೋ ಹಾಕಿಸಿಕೊಂಡಿದ್ದರು. ಈ ಬಗ್ಗೆ ಆಕ್ರೋಶ ಹೊರಹಾಕಿದ್ದ ಮಾಜಿ ಸಚಿವ ರೇವಣ್ಣ ಶಾಸಕ ಪ್ರೀತಂಗೌಡ ಫೋಟೋ ತೆಗೆಯುವಂತೆ ಆಗ್ರಹಿಸಿದ್ದರು. ಅಷ್ಟೇ ಅಲ್ಲದೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಗುತ್ತಿಗೆದಾರರ ಹಣ ಬಿಡುಗಡೆಯಾಗುತ್ತಿಲ್ಲ ಎಂದು ರೇವಣ್ಣ ಆರೋಪ ಮಾಡಿದ್ದರು.
ರೇವಣ್ಣ ಎಲ್ಲ ಆರೋಪಕ್ಕೂ ಖಾರವಾಗಿ ತಿರುಗೇಟು ನೀಡಿರುವ ಶಾಸಕ ಪ್ರೀತಂಗೌಡ, ನಾನು ಹಾಸನದಲ್ಲೇ ಹುಟ್ಟಿರುವುದು ನನಗೂ ರಾಜಕಾರಣ ಮಾಡುವುದಕ್ಕೆ ಗೊತ್ತಿದೆ. ನನ್ನ ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಮಾಡುವುದು ಗೊತ್ತಿದೆ. ಅವರ ಕ್ಷೇತ್ರದಲ್ಲಿ ಅವರು ಅಭಿವೃದ್ಧಿ ಮಾಡಲಿ. ಇವರನ್ನು ಬಿಟ್ಟು ಜಿಲ್ಲೆಯಲ್ಲಿ ಯಾರು ಬೆಳೆಯಬಾರದು. ಕೆಂಪು ಲೈಟ್ ಹಾಕೊಂಡು ಓಡಾಡಬಾರದು, ಅಧಿಕಾರ ಇರಲಿ ಬಿಡಲಿ ಅವರದ್ದೇ ನಡೆಯಬೇಕು ಅಂದುಕೊಂಡಿದ್ದಾರೆ ಎಂದರು.
ಇದು ಪಾಳೇಗಾರರ ಕಾಲವಲ್ಲ, ಮೊದಲು ಇಂಥ ಮನಸ್ಥಿತಿಯಿಂದ ಹೊರ ಬರಲಿ. ಹಾಸನ ಕ್ಷೇತ್ರಕ್ಕೂ ರೇವಣ್ಣಗೂ ಸಂಬಂಧ ಏನು? ಬೇಕಾದರೇ ರೇವಣ್ಣ ಹಾಸನ ಕ್ಷೇತ್ರಕ್ಕೆ ಬಂದು ಚುನವಾಣೆಗೆ ನಿಲ್ಲಲಿ ಎಂದು ಸವಾಲು ಹಾಕಿದ ಬಿಜೆಪಿ ಶಾಸಕ ಪ್ರೀತಂಗೌಡ, ಮುಂದಿನ ದಿನಗಳಲ್ಲಿ ರೇವಣ್ಣ ಅವರ ಮನಸ್ಥಿತಿಯನ್ನು ಚೇಂಜ್ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.