ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ಬೆಳಗ್ಗೆ ನಾನು ನಾಮಪತ್ರ ಸಲ್ಲಿಸಲು ಸಮಯ ನಿಗದಿಪಡಿಸಲಾಗಿದೆ ಎಂದು ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
Advertisement
ಈ ಕುರಿತು ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮುಹೂರ್ತ ನಿಗದಿ ಮಾಡಿದ್ದಾರೆ. ರೇವಣ್ಣ ಅವರ ಸಲಹೆಯಂತೆ ಸೋಮವಾರ ಬೆಳಗ್ಗೆ 10.15 ರಿಂದ 10.30 ರೊಳಗೆ ನಾಮಪತ್ರ ಸಲ್ಲಿಸುತ್ತೇನೆ. ಸೋಮವಾರ ಬೆಳಗ್ಗೆ 10.15 ರಿಂದ 10.30 ರವರೆಗೆ ಶುಭ ಘಳಿಗೆ ಇದೆ. ಈ ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸುವಂತೆ ರೇವಣ್ಣ ಸಲಹೆ ನೀಡಿದ್ದಾರೆ ಎಂದು ನಗುತ್ತಾ ಹೇಳಿದರು.
Advertisement
ಕಾಂಗ್ರೆಸ್ ನಿಂದ ನಸೀರ್ ಅಹಮದ್ ನಾಮಪತ್ರ ಸಲ್ಲಿಕೆ ಮಾಡುತ್ತಾರೆ ಎಂಬ ಮಾಹಿತಿ ಇದೆ. ಆದರೆ ಖಚಿತವಾಗಿಲ್ಲ ಎಂದು ಇದೇ ವೇಳೆ ತಿಳಿಸಿದರು. ಜೆಡಿಎಸ್ ಪಕ್ಷ ಸಂಘಟನೆ ವಿಚಾರದ ಕುರಿತು ಮಾತನಾಡಿದ ಅವರು, ಪಕ್ಷ ಸಂಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಜಿಲ್ಲಾವಾರು ಸಭೆಗಳು ಆರಂಭವಾಗಿವೆ. ಆಡಳಿತಾರೂಢ ಪಕ್ಷಗಳ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ. ಇಬ್ಬರು ಶಾಸಕರು ಮುನಿಸಿಕೊಂಡಿದ್ದಾರೆ. ಅವರಿಗೂ ಅಸಮಾಧಾನ ಇದ್ದಂತಿಲ್ಲ. ದೊಡ್ಡವರಾಗಿರಲಿ, ಚಿಕ್ಕವರಾಗಿರಲಿ ಲೋಪಗಳನ್ನ ಸರಿಪಡಿಸಿಕೊಂಡು ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತೇವೆ ಎಂದರು.
Advertisement
Advertisement
ರೈತರಿಂದ ಇಂದು ಹೆದ್ದಾರಿ ತಡೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ರೈತರ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ. ರೈತರಿಗೆ ಕೇಂದ್ರದ ಸ್ಪಷ್ಟೀಕರಣಗಳು ತೃಪ್ತಿ ತರುತ್ತಿಲ್ಲ. ಕೇಂದ್ರ ರೈತರನ್ನು ಅಪರಾಧ ಪಟ್ಟಿಯಲ್ಲಿ ಸೇರಿಸುವ ಯತ್ನ ಮಾಡುತ್ತಿದೆ. ಈ ಮೂಲಕ ರೈತರ ಹೋರಾಟ ದುರ್ಬಲಗೊಳಿಸುವ ಯತ್ನ ನಡೆಸುತ್ತಿದೆ. ವಿದೇಶಿ ಸೆಲೆಬ್ರಿಟಿಗಳ ಟ್ವೀಟ್ ತಪ್ಪು ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಹಿಂದೆ ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ ಹೇರಿಕೆಯನ್ನು ಜಗತ್ತಿನ ಜನತಾಂತ್ರಿಕ ದೇಶಗಳು ವಿರೋಧಿಸಿದ್ದವು. ಆಗ ಇದ್ದ ಜನಸಂಘವೂ ಅದನ್ನು ಒಪ್ಪಿಕೊಂಡಿತ್ತು. ಆದರೆ ಈಗ ಹಾಲಿವುಡ್ ಸೆಲೆಬ್ರಿಟಿಗಳ ಟ್ವೀಟ್ ತಪ್ಪು ಎಂದು ಬಿಜೆಪಿ ಹೇಳುತ್ತಿದೆ. ವಿದೇಶಿ ಸೆಲೆಬ್ರಿಟಿಗಳು ಸರ್ಕಾರದ ನೀತಿಯನ್ನಷ್ಟೇ ವಿರೋಧಿಸಿರೋದು. ಅವರು ದೇಶವನ್ನು ವಿರೋಧಿಸಿಲ್ಲ ಎಂದು ಹೇಳಿದರು.