ಬೆಂಗಳೂರು: ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿಲಾಗಿದೆ.
ಪೀಟರ್ ಮತ್ತು ಸೂರ್ಯ ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯದ ಪೂಜಾ ಕಲ್ಯಾಣ ಮಂಟಪದ ಹಿಂಭಾಗ ಇಬ್ಬರ ಕಾಲಿಗೆ ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್ ಪೇಟೆ ಇನ್ಸ್ ಪೆಕ್ಟರ್ ಚಿದಾನಂದ ಗುಂಡು ಹೊಡೆದು ಬಂಧಿಸಿದ್ದಾರೆ. ಪೀಟರ್ ಬಲಗಾಲಿಗೆ ಗುಂಡು ಹೊಡೆದಿದ್ದರೆ ಸೂರ್ಯನ ಎಡಗಾಲಿಗೆ ಗುಂಡು ಬಿದ್ದಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಪ್ರಕರಣದಲ್ಲಿ ಅನುಮಾನಿತರನ್ನು ಪಟ್ಟಿ ಮಾಡಲಾಗಿತ್ತು. ಪ್ರಮುಖ ಇಬ್ಬರು ಆರೋಪಿಗಳನ್ನು ಈಗ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೀಟರ್ ಮತ್ತು ಸೂರ್ಯ ಎಂಬಾತನ ಹೆಸರು ಕೇಳಿ ಬಂದಿತ್ತು. ಬಹಳಷ್ಟು ಶ್ರಮವಹಿಸಿ ನಮ್ಮ ಪೊಲೀಸರು ಆರೋಪಿಗಳನ್ನು ಹುಡುಕಾಡಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಟಿಕ್‍ಟಾಕ್, ಫೇಸ್ಬುಕ್‍ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ
ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿತ್ತು. ಇವತ್ತು ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಆರೋಪಿಗಳು ಇರುವ ಸುಳಿವು ಸಿಕ್ಕಿತ್ತು. ಪೊಲೀಸರು ಬಂಧಿಸಲು ತೆರಳಿದ್ದಾಗ ಆರೋಪಿಗಳು ಹಲ್ಲೆಗೆ ಮುಂದಾಗಿದ್ದರು ಎಂದು ವಿವರಿಸಿದರು.
ಕೊಲೆ ಮಾಡಿ 800 ಎಕರೆ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಅವಿತುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಲು ತೆರಳುತ್ತಿದ್ದಾಗ ಚಾಕುವಿನಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.