ವಿಲ್ಲಿಂಗ್‍ಟನ್: ರೂಪಾಂತರಿ ಕೊರೊನಾ ಅಬ್ಬರದ ಹಿನ್ನೆಲೆ ನ್ಯೂಜಿಲ್ಯಾಂಡ್ ನ ಪ್ರಮುಖ ನಗರಗಳು ಲಾಕ್‍ಡೌನ್ ಗೆ ಒಳಪಡಲಿವೆ. ಇಂದು ಮಧ್ಯರಾತ್ರಿಯಿಂದಲೇ ಪ್ರಮುಖ ನಗರಗಳಲ್ಲಿ ಲಾಕ್‍ಡೌನ್ ನಿಯಮಗಳ ಜಾರಿಯಾಗಲಿವೆ ಎಂದು ಸರ್ಕಾರ ಪ್ರಕಟನೆ ಹೊರಡಿಸಿದೆ.
ಪ್ರಧಾನ ಮಂತ್ರಿ ಜೆಸಿಂಡಾ ಅರ್ಡರ್ನ್ ತಜ್ಞರು ಮತ್ತು ಸಂಪುಟ ಸದಸ್ಯರನ್ನೊಳಗೊಂಡ ಸಮಿತಿ ಜೊತೆಗಿನ ಸಭೆ ಬಳಿಕ ಮೂರು ದಿನದ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ. ನಾವು ಜಾಗೂರಕರಾಗುವರೆಗೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರೋದು ಅಸಾಧ್ಯ. ಹಾಗಾಗಿ ಲಾಕ್‍ಡೌನ್ ಘೋಷಣೆ ಮಾಡಲಾಗಿದ್ದು, ಈ ವೇಳೆ ಕೊರೊನಾ ಸೋಂಕಿತರ ಪತ್ತೆಗಾಗಿ ಕೆಲಸ ಮಾಡಲಿದ್ದೇವೆ. ಇದರಿಂದ ಹೊಸ ಕೊರೊನಾ ವೈರಸ್ ಸಂಪರ್ಕಿತರನ್ನ ಪತ್ತೆ ಹಚ್ಚೋದು ಸುಲಭವಾಗಲಿದೆ ಎಂದು ಜೆಸಿಂಡಾ ಹೇಳಿದ್ದಾರೆ.
ದೇಶದಲ್ಲಿ ಕಠಿಣ ನಿಯಮಗಳನ್ನ ಜಾರಿಗೆ ತರಲಾಗುತ್ತಿದ್ದು, ಆಕಲೆಂಡ್ ನಗರದಲ್ಲಿ ಟಫ್ ಲಾಕ್‍ಡೌನ್ ಜಾರಿಯಾಗಲಿದೆ. ಆಕಲೆಂಡ್ ನಗರದಲ್ಲಿ ಒಂದೇ ಕುಟುಂಬ ಮೂವರಿಗೆ ಹೊಸ ತಳಿಯ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದ್ದರಿಂದ ನಗರದಲ್ಲಿ ಹೊಸ ತಳಿಯ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್‍ಡೌನ್ ತರಲಾಗುತ್ತಿದೆ ಪ್ರಧಾನಿಗಳು ಸ್ಪಷ್ಟಪಡಿಸಿದ್ದಾರೆ.
ಹೊಸ ತಳಿ ಕಾಣಿಸಿಕೊಂಡ ಬೆನ್ನಲ್ಲೇ ಪ್ರಧಾನಿ ಜೆಸಿಂಡಾ ತಮ್ಮ ಎಲ್ಲ ಕಾರ್ಯಕ್ರಮಗಳನ್ನ ರದ್ದುಗೊಳಿಸಿ ರಾಜಧಾನಿಗೆ ಹಿಂದಿರುಗುತ್ತಿದ್ದಾರೆ. ಮೂರು ದಿನಗಳ ಕಾಲ ತಜ್ಞರ ಜೊತೆ ಕೊರೊನಾಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಈ ಮೂರು ದಿನದಲ್ಲಿ ದೇಶಕ್ಕೆ ಆಗಮಿಸುವ ವಿದೇಶಿಯರು ಕಡ್ಡಾಯ ಎರಡು ವಾರ ಕ್ವಾರಂಟೈನ್ ನಲ್ಲಿರುವಂತೆ ಸರ್ಕಾರ ಆದೇಶ ಹೊರಡಿಸಿದೆ.