– ದೇಹ ಸುಡುವಾಗ ವಾಸನೆ ಬರುತ್ತದೆಂದು ತುಪ್ಪ, ಮಸಾಲೆ ಸುರಿದಳು
– ಪೂಜೆ ಮಾಡಿ ಬಲಿ ಕೊಡಲು ವಿಕೃತಿ
ಕೋಲ್ಕತ್ತಾ: ಮುಢನಂಬಿಕೆಗೆಯಿಂದಾಗಿ ಪಾಪಿ ತಾಯಿ ತನ್ನ 25 ವರ್ಷದ ಮಗನನ್ನು ರುಬ್ಬುವ ಕಲ್ಲಿನಿಂದ ಚಚ್ಚಿ, ಮಸಾಲೆ ಹಾಗೂ ತುಪ್ಪದಲ್ಲಿ ಹುರಿಯುವ ಮೂಲಕ ವಿಕೃತಿ ಮೆರೆದಿದ್ದಾಳೆ.
ಪಶ್ಚಿಮ ಬಂಗಾಳದ ಬಿಧನ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಿಳೆ ತನ್ನ 25 ವರ್ಷದ ಮಗನ ತಲೆಯನ್ನು ರುಬ್ಬುವ ಕಲ್ಲಿನಿಂದ ಒಡೆದು, ದೇಹವನ್ನು ಮಸಾಲೆ ಹಾಗೂ ತುಪ್ಪದಲ್ಲಿ ಹುರಿದು ಆಚರಣೆ ಮಾಡಿದ್ದಾಳೆ. ಸಂತ್ರಸ್ತನನ್ನು ಅರ್ಜುನ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಯುವಕನ ತಂದೆ ಅನಿಲ್ ಮಹೇನ್ಸರಿಯಾ ಮಗ ಕಾಣೆಯಾಗಿರುವ ಕುರಿತು ದೂರು ಸಲ್ಲಿಸಿದ್ದಾರೆ. ತಕ್ಷಣವೇ ಪ್ರಕರಣ ಕೈಗೆತ್ತಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದು, ಈ ವೇಳೆ ತಾಯಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.
ಗುರುವಾರ ಸಂಜೆ ಮಾಹೇನರಿಯ ಎರಡು ಅಂತಸ್ತಿನ ಮನೆಯಲ್ಲಿ ವ್ಯಕ್ತಿಯೊಬ್ಬರ ಅರೆ ಸುಟ್ಟ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಅಸ್ಥಿಪಂಜರವು ಅರ್ಜುನ್‍ಗೆ ಸೇರಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಳಿಕ ಅರ್ಜುನ್ ತಾಯಿ ಗೀತಾ ಹಾಗೂ ಆತನ ತಮ್ಮ ವಿದೂರ್ ನನ್ನು ಬಂಧಿಸಿದ್ದಾರೆ. ಗೀತಾ ಹಾಗೂ ವಿದೂರ್ ಪ್ರಾರ್ಥನೆ ಮಾಡುವ ವೇಳೆ ಪೊಲೀಸರು ದೊಡ್ಡ ಕಡಾಯಿ ಹಾಗೂ ರೂಮ್‍ನಲ್ಲಿ ಸುಟ್ಟ ಕಲೆಗಳಿರುವುದನ್ನು ಗಮನಿಸಿದ್ದಾರೆ. ಬಳಿಕ ಪ್ರಾರ್ಥನಾ ಕೊಠಡಿಯಲ್ಲಿ ಅರ್ಜುನ್‍ನನ್ನು ಜೀವಂತವಾಗಿ ಸುಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅರ್ಜುನ್‍ನನ್ನು ಟವೆಲ್‍ನಲ್ಲಿ ಸುತ್ತಿ ಟೆರೇಸ್‍ಗೆ ಎಳೆದೊಯ್ಯುವ ಮೊದಲು ಪ್ರಾರ್ಥನಾ ಕೊಠಡಿಯಲ್ಲಿ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ರಕ್ತಸಿಕ್ತವಾಗಿದ್ದ ರುಬ್ಬುವ ಕಲ್ಲನ್ನು ಸಹ ಪೊಲೀಸರು ಪತ್ತೆಹಚ್ಚಿದ್ದಾರೆ.
ಬಳಿಕ ಗೀತಾಳನ್ನು ವಿಚಾರಣೆ ನಡೆಸಲಾಗಿದ್ದು, ಈ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. ಸುಡುವಾಗ ಮಾಂಸದ ವಾಸನೆ ಬರಬಾರದು ಎಂಬ ಉದ್ದೇಶದಿಂದ ತನ್ನ ಮಗನ ದೇಹವನ್ನು ತುಪ್ಪ, ಕರ್ಪೂರ ಹಾಗೂ ಮಸಾಲೆಗಳೊಂದಿಗೆ ದೇಹವನ್ನು ಹುರಿದಿರುವುದಾಗಿ ತಿಳಿಸಿದ್ದಾಳೆ.
ಈ ಕುರಿತು ಅರ್ಜುನ್ ತಂದೆ ಅನಿಲ್ ಮಾಹಿತಿ ನೀಡಿದ್ದು, ದೇವರಿಗೆ ಬಲಿ ಕೊಡಲು ನನ್ನ ಪತ್ನಿ 25 ವರ್ಷದ ಹಿರಿಯ ಮಗನನ್ನೇ ಕೊಲೆ ಮಾಡಿದ್ದಾಳೆ. ನಾನು 2019ರಲ್ಲೇ ಮನೆ ತೊರೆದಿದ್ದು, ನನ್ನ ಹಿರಿಯ ಮಗ ಹೃದಯ, ನರಗಳ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ ನನ್ನ ಪತ್ನಿ ಮಂತ್ರ, ತಂತ್ರಗಳನ್ನು ಮಾಡಿ ಅವನನ್ನು ಬಲಿ ನೀಡಿರಬಹುದು ಎಂದು ಶಂಕಿಸಿದೆ ಎಂದು ವಿವರಿಸಿದ್ದಾರೆ.