– 3 ವರ್ಷದ ಮಗುವಿನ ಜೊತೆ ಈಜಿ ದಡ ಸೇರಿದ ಮಹಿಳೆ
ಯಾದಗಿರಿ: ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಕಾಲುವೆಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಜಿಲ್ಲೆಯ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಳಿ ನಡೆದಿದೆ. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಒಂದೇ ಕುಟುಂಬದ ಮೂವರು ಜಲ ಸಮಾಧಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಟ್ಟಿ ಗ್ರಾಮದ ಪವನ್ ಬಿರಾದಾರ್ (34), ಪವನ್ ತಂದೆ ಶರಣಗೌಡ ಬಿರಾದಾರ್ (61), ತಾಯಿ ಜಾನಕಿ ಬಿರಾದಾರ್ (55) ಮೃತರು. ಮೃತ ಪವನ್ ಕುಟುಂಬದ ಎರಡು ವರ್ಷದ ಮಗು ಸೇರಿ ಒಟ್ಟು ಐದು ಜನ ಒಂದೇ ಕಾರ್ ನಲ್ಲಿ ಜಮೀನು ನೋಡಲು ಬಂದಿದ್ದರು. ಕಾಲುವೆಯ ದಡದ ಮೇಲೆ ಕಾರ್ ನಲ್ಲಿ ಜಮೀನು ವೀಕ್ಷಿಸಿ ಹಿಂದಿರುಗುತ್ತಿದ್ದರು. ಈ ವೇಳೆ ಕಾರ್ ರಿವರ್ಸ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಕಾಲುವೆಗೆ ಬಿದ್ದಿದೆ.
ಕಾರು ನೀರಿಗೆ ಬಿದ್ದು ಕೊಚ್ಚಿ ಹೋಗುತ್ತಿದ್ದರು, ಧೃತಿಗೆಡದೆ ಪವನ್ ಅವರ 28 ವರ್ಷದ ಪತ್ನಿ ಪ್ರೇಮಾ ತಮ್ಮ ಮೂರು ವರ್ಷದ ಮಗುವಿನೊಂದಿಗೆ ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ. ಆದ್ರೆ ಪವನ್ ಪತ್ನಿ ಮತ್ತು ಮಗು ಬಿಟ್ಟು ಉಳಿದವರೆಲ್ಲರೂ ನೀರುಪಾಲಾಗಿದ್ದಾರೆ. ಇದರಲ್ಲಿ ಓರ್ವನ ಶವ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದೆ. ಸ್ಥಳಕ್ಕೆ ಹುಣಸಗಿ ಪೊಲೀಸರು ಭೇಟಿ ನೀಡಿ ಘಟನೆ ಮಾಹಿತಿ ಪಡೆಯುತ್ತಿದ್ದಾರೆ.