– 5 ಲಕ್ಷ ಮೌಲ್ಯದ 17 ಬೈಕ್ ಜಪ್ತಿ
ರಾಯಚೂರು: ಜಿಲ್ಲಾ ಪೊಲೀಸರಿಗೆ ತಲೆನೋವಾಗಿದ್ದ ರಿಮ್ಸ್ ಆಸ್ಪತ್ರೆ ಮುಂದೆ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 17 ಬೈಕ್ ಜಪ್ತಿಯಾಗಿದ್ದು, ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ರಾಮು, ಬಸವರಾಜ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 5,02,000 ಮೌಲ್ಯದ ಒಟ್ಟು 17 ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಿಮ್ಸ್ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ಬೈಕುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಅದರಲ್ಲೂ ಹೀರೋ ಹೊಂಡಾ ಕಂಪನಿಯ ಬೈಕ್‍ಗಳನ್ನೇ ಈ ಖದೀಮರು ಹೊಂಚು ಹಾಕಿ ಕದ್ದಿದ್ದಾರೆ. ಆರೋಪಿಗಳಿಬ್ಬರು ಆರ್.ಟಿ.ಪಿ.ಎಸ್ ನಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ರಾಯಚೂರಿನಲ್ಲಿ ಕಳ್ಳತನ ಮಾಡಿದ ಬೈಕ್‍ಗಳನ್ನು ಲಿಂಗಸುಗೂರು, ಸಿಂಧನೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕಳ್ಳರು ಬೇರೆಲ್ಲೂ ಕೈಚಳಕ ತೋರಿಲ್ಲ. ಕೇವಲ ರಿಮ್ಸ್ ಆಸ್ಪತ್ರೆ ಪಾರ್ಕಿಂಗ್ ಸ್ಥಳವನ್ನೇ ಟಾರ್ಗೆಟ್ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.