– ನಾಲ್ಕೂವರೆ ವರ್ಷದ ಪ್ರಾಮಾಣಿಕ ಪ್ರಯತ್ನವಿದು
– ಆಡಿಕೊಳ್ಳುವವರಿಗೆ ಕೆಲಸದ ಮೂಲಕ ಉತ್ತರ
ಬೆಂಗಳೂರು: ನನ್ನ ಮೊದಲ ಸಿನಿಮಾ ವಿಕ್ಟರಿ ಸ್ವಮೇಕ್, ಆದರೂ ಕೆಲವರು ರಿಮೇಕ್ ನಿರ್ದೇಶಕ ಎಂದು ಆಡಿಕೊಳ್ಳುತ್ತಿದ್ದಾರೆ. ಒಂದು ಸಿನಿಮಾ ಮಾಡಿದವರಿಗೆ ನೀಡುವ ಗೌರವವನ್ನೂ ನೀಡುತ್ತಿಲ್ಲ. ಹೀಗೆ ಆಡಿಕೊಳ್ಳುವವರಿಗೆ ಪೊಗರು ಸಿನಿಮಾ ತಕ್ಕ ಉತ್ತರ ಎಂದು ಪೊಗರು ನಿರ್ದೇಶಕ ನಂದಕಿಶೋರ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ವರೆಗೆ ನಾನು 7 ಸಿನಿಮಾಗಳನ್ನು ಮಾಡಿದ್ದೇನೆ, ಇದರಲ್ಲಿ 5 ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದೇನೆ. ಅಧ್ಯಕ್ಷ, ರನ್ನ ಹೀಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದೇನೆ. ಆದರೂ ರೀಮೇಕ್ ಡೈಕ್ಟರ್, ಏನೂ ಬರಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ. ನನ್ನ ಮೊದಲ ಸಿನಿಮಾನೇ ವಿಕ್ಟರಿ ಸ್ವಮೇಕ್ ಚಿತ್ರ. ಆದರೂ ಇಂದು ಒಂದು ಸಿನಿಮಾ ಮಾಡಿದವರಿಗೆ ನೀಡುವ ಗೌರವವನ್ನೂ ನಮಗೆ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪೊಗರು ಸಿನಿಮಾದ ಪ್ರತಿ ಶಾಟ್, ಪ್ರತಿ ಸೀನ್‍ನ್ನು ಸಹ ಸ್ವಂತಿಕೆ ಇಟ್ಟುಕೊಂಡು ಮಾಡಿದ್ದೇನೆ. ಈಗಲಾದರೂ ಆ ಗೌರವ ನನಗೆ ಸಿಗಬೇಕೆಂದು ಅಪೇಕ್ಷಿಸುತ್ತೇನೆ. ನಾಲ್ಕೂವರೆ ವರ್ಷದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಸಿನಿಮಾ ಮಾಡಿದ್ದೇವೆ. ನಿರ್ಮಾಪಕರು, ನಟ ಧ್ರುವ ಸರ್ಜಾ ಹಾಗೂ ನಾನು ತುಂಬಾ ಕಷ್ಟ ಪಟ್ಟು ಸಿನಿಮಾ ಮಾಡಿದ್ದೇವೆ. ಈಗ ಜನಗಳನ್ನು ನೋಡಿ ಸಿನಿಮಾ ಚೆನ್ನಾಗಿದೆ ಅಂದರೆ ತಪ್ಪಾಗುತ್ತದೆ. ಸಿನಿಮಾ ಹೇಗಿದೆ ಎಂದು ಸಂಜೆ ವೇಳೆಗೆ ಪ್ರೇಕ್ಷಕರೇ ಹೇಳುತ್ತಾರೆ. ಬೇರೆ ರಾಜ್ಯಗಳಲ್ಲಿ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಸಿನಿಮಾ ನೋಡಲು ಪ್ರೇಕ್ಷಕರ ಬಳಿ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಇಷ್ಟೊಂದು ಜನ ಸೇರಿದ್ದಾರೆ. ಕಲಾಭಿಮಾನಿಗಳು ಕಲಾವಿದರನ್ನು ಯಾವತ್ತೂ ಕೈಬಿಡಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. ಸಿನಿಮಾ ಏನೇ ಸಕ್ಸಸ್ ಕಂಡರು ಅವರು ಹಾಕಿರುವ ಭಿಕ್ಷೆ ಅಷ್ಟೇ. ತುಂಬಾ ಪಾಸಿಟಿವ್ ಆಗಿ ಓಪನಿಂಗ್ ಬರುತ್ತಿದೆ. ಸಂಜೆ ವೇಳೆಗೆ ಎಲ್ಲ ಚಿತ್ರಣ ಸಿಗಲಿದೆ ಎಂದು ನಂದ ಕಿಶೋರ್ ಹೇಳಿದರು.
ಪ್ರೇಕ್ಷಕರಿಗೆ ನಿರಾಸೆಯಂತೂ ಆಗಲ್ಲ, ಮನರಂಜನೆ ನೀಡೇ ನೀಡುತ್ತೆ ಎಂಬ ನಂಬಿಕೆ ಇದೆ. ಬ್ಯಾಕ್ ಟು ಬ್ಯಾಕ್ 5 ಹಿಟ್ ಸಿನಿಮಾ ಕೊಟ್ಟಿದ್ರೂ, ರಿಮೇಕ್ ಮಾಡ್ತಾನೆ ಅನ್ನೋ ಹೆಸರು ಕೊಡ್ತಾ ಇದ್ರು ಈ ಸಿನಿಮಾದಿಂದ ಅ ಹೆಸರು ಹೋಗಿ ಪಕ್ಕ ಸ್ವಮೇಕ್ ಅನ್ನೋದು ಗೊತ್ತಾಗುತ್ತೆ. ಆಡಿಕೊಳ್ಳುವವರಿಗೆ ಕೆಲಸದ ಮೂಲಕ ಉತ್ತರ ನೀಡಿದ್ದೇನೆ. ಎರಡೂ ತರದ ಸಿನಿಮಾ ಮಾಡಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದೇನೆ ಎಂದು ತಿಳಿಸಿದರು.