ಕ್ಯಾನ್ಬೆರಾ: ಆತ ಸ್ಟಂಪ್ ಹಿಂದೆ ಹೇಳಿದ್ದನ್ನು ನಾನೆಂದೂ ಮರೆಯಲ್ಲ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾದ ಯುವ ಆಟಗಾರ ಕ್ಯಾಮರೂನ್ ಗ್ರೀನ್ ಭಾರತದ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಹಾಡಿಹೊಗಳಿದ್ದಾರೆ.
ಬುಧವಾರ ಕ್ಯಾನ್ಬೆರಾದಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ 13ರನ್‍ಗಳ ಅಂತರದಿಂದ ಗೆದ್ದುಕೊಂಡಿದೆ. ಆದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರೆಡು ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ ತಂಡ ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಏಕದಿನ ಸರಣಿಯಲ್ಲಿ ಆಸೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕ್ಯಾಮರೂನ್ ಗ್ರೀನ್ ಪಾದಾರ್ಪಣೆ ಮಾಡಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಗ್ರೀನ್, ನಾನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಹೋದಾಗ ರಾಹುಲ್ ವಿಕೆಟ್ ಕೀಪಿಂಗ್‍ನಲ್ಲಿ ನಿಂತಿದ್ದರು. ಈ ವೇಳೆ ರಾಹುಲ್ ಅವರು ನರ್ವಸ್ ಆಗಿದ್ದೀಯಾ ಎಂದು ಪ್ರಶ್ನೆ ಮಾಡಿದರು. ನಾನು ಆಗ ಹೌದು ಸ್ವಲ್ಪ ನರ್ವಸ್ ಆಗಿದ್ದೇನೆ ಎಂದು ಹೇಳಿದೆ. ಆಗ ರಾಹುಲ್ ಅವರು ತಕ್ಷಣ ಏನೂ ಆಗಲ್ಲ ಚೆನ್ನಾಗಿ ಆಡು ಯಂಗ್ ಸ್ಟಾರ್ ಎಂದರು. ಅವರು ಹೇಳಿದ ಮಾತನ್ನು ನಾನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ.
ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾದ ಪರವಾಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ 230ನೇ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ವಿರುದ್ಧ ಮೂರನೇ ಏಕದಿನದೊಂದು ಆಸೀಸ್‍ನ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರಿಂದ ಕ್ಯಾಪ್ ಪಡೆದ ಗ್ರೀನ್, ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೇ 27 ರನ್ ನೀಡಿದ್ದರು. ಇದೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗ್ರೀನ್, 27 ಬಾಲಿಗೆ 21 ರನ್ ಹೊಡೆದು ಔಟ್ ಆಗಿದ್ದರು.