– ಯೋಗಿ ಸರ್ಕಾರ ರೋಗಿ ಸರ್ಕಾರ ಆಗಿದೆ
ಬೆಂಗಳೂರು: ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಲಿತ ಯುವತಿ ಸಾವನ್ನಪ್ಪಿದ್ದು, ಈ ಬಗ್ಗೆ ರಾಹುಲ್ ಗಾಂಧಿ ಅವರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ಹಲ್ಲೆ ಮಾಡಿದ್ದು ಖಂಡನೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ದಲಿತ ಯುವತಿ ಅತ್ಯಾಚಾರಕ್ಕೆ ಒಳಗಾಗಿ ಸಂತ್ರಸ್ತೆ ಆಸ್ಪತ್ರೆಯಲ್ಲೇ ಸಾವನ್ನಿಪ್ಪಿದ್ದಾಳೆ. ಈ ಕೃತ್ಯವನ್ನು ಖಂಡಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರತಿಭಟಿಸಿದ್ದಾರೆ. ಆದರೆ ಅವರ ಮೇಲೆ ಹಲ್ಲೆ ಮಾಡಿ, ಉತ್ತರ ಪ್ರದೇಶದ ಪೊಲೀಸರು ಕೈ ಮಾಡಿ ದೌರ್ಜನ್ಯವೆಸಗಿದ್ದಾರೆ. ಉತ್ತರ ಪ್ರದೇಶದಂತಹ ಗೂಂಡಾ ರಾಜ್ಯದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ರಕ್ಷಣೆ ಇಲ್ಲ ಎಂದರೇ ಸಾಮಾನ್ಯ ಜನರಿಗೆ ರಕ್ಷಣೆ ಸಿಗೋದು ತುಂಬಾ ಕಷ್ಟ. ಇದನ್ನು ಎಲ್ಲರೂ ಖಂಡಿಸಬೇಕೆಂದು ಎಂದು ಮನವಿ ಮಾಡಿದರು.
ಸಂತ್ರಸ್ತೆಯನ್ನು ನೋಡಲು ಕೂಡ ಕುಟುಂಬಸ್ಥರಿಗೆ ಅವಕಾಶ ನೀಡಿಲ್ಲ. ಅವರ ತಂದೆ-ತಾಯಿಗೆ ಯುವತಿಯ ಮೃತದೇಹವನ್ನು ನೀಡಿಲ್ಲ. ಇದು ಯೋಗಿ ಆದಿತ್ಯನಾತ್ ಸರ್ಕಾರದ ಕ್ರಮವಾಗಿದೆ. ದೆಹಲಿಯ ನಿರ್ಭಯಾ ಘಟನೆಗಿಂತಲೂ ಹೀನಾಯ ಕೃತ್ಯ ಇದು. ಮಾನವೀಯ ದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಧೈರ್ಯ ತುಂಬಲು ತೆರಳಿದ್ದರು. ಅದಕ್ಕೂ ಅವಕಾಶ ನೀಡದೇ, ಹಲ್ಲೆ ಮಾಡಿರುವುದು ಎಷ್ಟು ಸರಿ. ಯುಪಿನಲ್ಲಿ ಕಾನೂನು ವ್ಯವಸ್ಥೆಯೇ ಇಲ್ಲ ಎಂದರು. ಇದನ್ನೂ ಓದಿ: ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ
ಇತ್ತ ರಾಹುಲ್ ಗಾಂಧಿ ವಿರುದ್ಧ ದೌರ್ಜನ್ಯ ಎಸಗಿರುವ ಕುರಿತು ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಉತ್ತರ ಪ್ರದೇಶ ಪೊಲೀಸರ ನಡೆ ಖಂಡನೀಯ. ಈ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಹತ್ರಾಸ್ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಯಾರು ಹೋರಾಡುತ್ತಿದ್ದಾರೆ. ಯಾವ ಕಾನೂನಿನ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ? ಏಕೆ ಸಂತ್ರಸ್ತ ಯುವತಿಯ ಕುಟುಂಬಕ್ಕೆ ಧೈರ್ಯ ತುಂಬಲು ಅವಕಾಶ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಡೆದುಕೊಂಡು ಹೋಗೋ ಹಕ್ಕು ಕೂಡ ಇಲ್ವಾ?- ಪೊಲೀಸರ ನಡೆಗೆ ರಾಹುಲ್ ಗಾಂಧಿ ಆಕ್ರೋಶ
ಪ್ರಧಾನಿ ಮೋದಿ ಯಾಕೆ ಭೇಟಿ ಬಚಾವೋ ಬಗ್ಗೆ ಏಕೆ ಮಾತನಾಡುತ್ತಿಲ್ಲ. ರಾಷ್ಟ್ರಮಟ್ಟದ ನಾಯಕರಿಗೆ ಈ ರೀತಿ ಆದ್ರೆ, ದೇಶದಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ? ಇದಕ್ಕೆ ಮುಂದಿನ ದಿನಗಳಲ್ಲಿ ದೇಶದ ಜನರು ಉತ್ತರ ನೀಡುತ್ತಾರೆ ಎಂದು ಡಿಕೆಶಿ ಎಚ್ಚರಿಕೆ ನೀಡಿದರು.
ರಾಹುಲ್ ಗಾಂಧಿ ಅವರೊಂದಿಗೆ ಪೊಲೀಸರು ನಡೆದುಕೊಂಡ ಕ್ರಮವನ್ನು ಖಂಡಿಸಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಿದರು. ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.