ಉಡುಪಿ: ಮಂಗಳೂರಿನಲ್ಲಿ ಉಗ್ರ ಸಂಘಟನೆಯನ್ನು ಬೆಂಬಲಿಸುವ ಗೋಡೆ ಬರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರ ವಿರೋಧಿ ಘೋಷಣೆ ಯಾರೇ ಹಾಕಿದರೂ, ಕಠಿಣ ಕ್ರಮ ತೆಗೆದುಕೊಳ್ಳುಬೇಕು. ಅದನ್ನು ನಮ್ಮ ಸರ್ಕಾರ ತೆಗೆದುಕೊಳ್ಳುತ್ತೆ ಅಂತ ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರೋ ಲವ್ ಜಿಹಾದ್ ವಿಚಾರದ ಕುರಿತು ಉಡುಪಿಯಲ್ಲಿ ಮಾತನಾಡಿದ ಕಟೀಲ್, ದೇಶದ ಬೇರೆ ಬೇರೆ ಕಡೆಗಳಲ್ಲಿ ಲವ್ ಜಿಹಾದ್ ಸುದ್ದಿಯಾಗುತ್ತಿದೆ. ಈಗಾಗಲೇ ಪಾರ್ಟಿ, ಕೋರ್ಟ್ ಕಮಿಟಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಸಿಎಂ ಒಪ್ಪಿಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಲವ್ ಜಿಹಾದ್ ಬಗ್ಗೆ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತೆ ಎಂದು ಭರವಸೆ ನೀಡಿದರು. ಇದನ್ನು ಓದಿ: ನಳಿನ್ ಕುಮಾರ್ ಕಟೀಲ್ ಬೆರಳು ಕಚ್ಚಿದ ಕೃಷ್ಣಮಠದ ಗೋವು
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರ ಜೊತೆಗೆ ಚರ್ಚಿಸಿ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಮಯ ಬಂದಾಗ ವಿಸ್ತರಣೆ ಮಾಡುತ್ತಾರೆ. ದೆಹಲಿಗೆ ಕೇಂದ್ರದ ಅನುದಾನ ತರುವುದಕ್ಕೆ ಮಂತ್ರಿಗಳು ಹೋಗುತ್ತಾರೆ. ದೆಹಲಿ ಹೋದಾಗ ಕೇಂದ್ರ ನಾಯಕರನ್ನು ಭೇಟಿ ಆಗುವುದು ಸಹಜ ಎಂದರು.
ಮಸ್ಕಿ, ಬಸವ ಕಲ್ಯಾಣ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕ್ಷೇತ್ರದಲ್ಲಿ ಪ್ರವಾಸ ಮಾಡಿ ಬಂದಿದ್ದೇವೆ. ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಗೆಲುವಾಗಲಿದೆ ಎಂದು ಕಟೀಲ್ ಭವಿಷ್ಯ ನುಡಿದರು. ಡಿಕೆಶಿ ಸಿಬಿಐ ತನಿಖೆ ವಿಚಾರಕ್ಕೆ ಮಾತನಾಡಿ, ಡಿಕೆಶಿಯನ್ನು ಟಾರ್ಗೆಟ್ ಮಾಡುತ್ತಿಲ್ಲ. ಸಿಬಿಐ ಎಲ್ಲರಿಗೂ ಸಮಾನವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಕೂಡ ಹಲವಾರು ಜನರ ತನಿಖೆ ಮಾಡಿದೆ. ಕಾಂಗ್ರೆಸ್ ಸಿಬಿಐ ದುರುಪಯೋಗ ಪಡಿಸಿಕೊಂಡಿತ್ತು ಎಂದು ಕೇಳಬೇಕಾಗುತ್ತದೆ ಎಂದು ವಿಪಕ್ಷಕ್ಕೆ ತಿರುಗೇಟು ನೀಡಿದರು.