ಚಾಮರಾಜನಗರ: ಮತಾಂತರ ವಿರೋಧಿ ಹೋರಾಟ ಸಮಿತಿ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ನಗರ ಮಂಡಲದ ವತಿಯಿಂದ ಇಂದು ಚಾಮರಾಜನಗರದಲ್ಲಿ ಮತಾಂತರ ವಿರೋಧಿಸಿ ಜಾಗೃತಿ ಜಾಥಾ ನಡೆಯಿತು.
ನಗರದ ಮಾರೀಗುಡಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಮತಾಂತರ ನಿಲ್ಲಿಸುವಂತೆ ಘೋಷಣೆ ಕೂಗುತ್ತಾ ಅಲ್ಲಿಂದ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ-209 ಹಾದುಹೋಗಿರುವ ಶ್ರೀ ಭುವನೇಶ್ವರಿ ವೃತ್ತ ತಲುಪಿ ಅಲ್ಲಿ ಮಾನವ ಸರಪಳಿ ರಚಿಸಿ ಮತಾಂತರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
Advertisement
Advertisement
ಬಳಿಕ ವಾಹನದಲ್ಲಿ ಮೈಕ್ ಕಟ್ಟಿಕೊಂಡು ಘೋಷಣೆ ಕೂಗುತ್ತಾ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹೊರಟ ಜಾಗೃತಿ ಜಾಥಾ ಜಿಲ್ಲಾಡಳಿತದ ಭವನ ತಲುಪಲು ಮುಂದಾಯಿತು. ಈ ವೇಳೆ ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲೇ ಮೈಕ್ ಮೂಲಕ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಪೊಲೀಸರು ಪ್ರತಿಭಟನಾಕಾರರನ್ನು ಹಾಗೂ ಮೈಕ್ ಕಟ್ಟಿದ್ದ ವಾಹನವನ್ನು ತಡೆಯುತ್ತಿದ್ದಂತೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಆರಂಭವಾಯಿತು.
Advertisement
Advertisement
ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿ ಬೇರೆ ಸ್ವರೂಪ ಪಡೆದುಕೊಳ್ಳುತ್ತಿರುವ ಪರಿಸ್ಥಿತಿಯನ್ನು ಅರಿತ ಚಾಮರಾಜನಗರ ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಪ್ರತಿಭಟನಾಕಾರರಿಂದ ಮೈಕ್ ಕಿತ್ತುಕೊಂಡು ರಾಷ್ಟ್ರಗೀತೆ ಆರಂಭಿಸಿದರು. ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಕೂಗಾಟವನ್ನು ಬಿಟ್ಟು ಡಿವೈಎಸ್‍ಪಿ ಅವರೊಂದಿಗೆ ರಾಷ್ಟ್ರಗೀತೆ ಹಾಡಿದರು.
ಬಳಿಕ ಪ್ರತಿಭಟನಾಕಾರರು ಜಿಲ್ಲಾಡಳಿತ ಪ್ರವೇಶದ್ವಾರದ ಒಳಗೆ ಪ್ರವೇಶಿಸಿ ರಸ್ತೆ ಬದಿಯಲ್ಲೇ ಕುಳಿತು ಮತಾಂತರಿಗಳು ಹಾಗೂ ಜಿಲ್ಲಾಡಳಿತದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.