ರಾಯಚೂರು: ಮಂತ್ರಾಲಯ ರಾಘವೇಂದ್ರ ಸ್ವಾಮಿ ವೃಂದಾವನ ದರ್ಶನಕ್ಕೆ ಜೂನ್ 15 ರಿಂದ ಭಕ್ತರಿಗೆ ಅವಕಾಶ ನೀಡುವುದಾಗಿ ಮಠದ ಆಡಳಿತ ಮಂಡಳಿ ಹೇಳಿತ್ತು. ಆದರೆ ಇನ್ನೂ ಸಿದ್ಧತೆಗಳು ಪೂರ್ಣಗೊಳ್ಳದ ಹಿನ್ನೆಲೆ ಮಠದ ಮಹಾದ್ವಾರ ಇಂದೂ ಸಹ ತೆರೆದಿಲ್ಲ.
ಭಕ್ತರಿಗೆ ಮುಕ್ತ ಅವಕಾಶ ನೀಡುವ ಕುರಿತು ಅನಿರ್ದಿಷ್ಟವಾಗಿ ಮುಂದೂಡಿರುವ ಮಠದ ಆಡಳಿತ ಮಂಡಳಿ, ದರ್ಶನಕ್ಕೆ ಅವಕಾಶ ನೀಡುವ ದಿನಾಂಕವನ್ನು ಸಧ್ಯದಲ್ಲೇ ಪ್ರಕಟಿಸುವುದಾಗಿ ಮಠದ ನೂತನ ವ್ಯವಸ್ಥಾಪಕ ವೆಂಕಟೇಶ್ ಜೋಶಿ ತಿಳಿಸಿದ್ದಾರೆ.
Advertisement
Advertisement
ಸುರಕ್ಷತಾ ಕ್ರಮ ಕೈಗೊಳ್ಳಲು ಪರಿಕರ ಜೋಡಣೆಗೆ ಸಮಯ ತೆಗೆದುಕೊಂಡ ಮಠ, ಮಂತ್ರಾಲಯ ಪ್ರವಾಸ ಮುಂದೂಡುವಂತೆ ಭಕ್ತರಿಗೆ ಮನವಿ ಮಾಡಿದೆ. ಮೊದಲಿಗೆ ಮಂತ್ರಾಲಯ ಮಠದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಮಾತ್ರ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹೊರರಾಜ್ಯ ಹಾಗು ಜಿಲ್ಲೆಯ ಭಕ್ತರಿಗೆ ಜೂನ್ 15ರ ನಂತರ ಅವಕಾಶ ಎಂದು ಹೇಳಲಾಗಿತ್ತು. ಆದರೆ ಮಂತ್ರಾಲಯದಲ್ಲಿ ದರ್ಶನಕ್ಕೆ ಪೂರ್ವ ತಯಾರಿ ಪೂರ್ಣಗೊಳ್ಳದ ಹಿನ್ನೆಲೆ ಇದುವರೆಗೂ ರಾಯರ ಮಠದ ಬಾಗಿಲು ತೆಗೆದಿಲ್ಲ. ರಾಯರ ವೃಂದಾವನ ದರ್ಶನಕ್ಕೆ ಬಂದವರಿಗೆ ದರ್ಶನ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಭಕ್ತರು ಹೊರಗಡೆಯಿಂದಲೇ ರಾಯರಿಗೆ ನಮಿಸಿ ಮರಳುತ್ತಿದ್ದಾರೆ.