– ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ರಷ್ಯಾ ಜೊತೆ ಒಪ್ಪಂದ
– ವರ್ಷಕ್ಕೆ 100 ಮಿಲಿಯನ್ ಡೋಸ್ ಉತ್ಪಾದನೆಗೆ ಯೋಜನೆ
– ಎರಡು ತಿಂಗಳಲ್ಲಿ ರಾಜ್ಯದಲ್ಲೇ ತಯಾರಾಗಲಿದೆ ಲಸಿಕೆ
ರಾಯಚೂರು: ರಷ್ಯಾ ಮೂಲದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಇನ್ನು ಮುಂದೆ ರಾಜ್ಯದಲ್ಲೇ ತಯಾರಾಗಲಿದೆ. ರಾಯಚೂರು ಮೂಲದ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿ ರಾಜ್ಯದಲ್ಲಿ ಲಸಿಕೆ ಉತ್ಪಾದಿಸಲಿದೆ. ಲಸಿಕೆಯ ಭಾರತೀಯ ಮಾರುಕಟ್ಟೆ ಭಾಗೀದಾರ ಕಂಪನಿ ಡಾ.ರೆಡ್ಡಿಸ್ ಲ್ಯಾಬೋರೇಟರಿಸ್ ಜೊತೆ ಮಾತುಕತೆ ಪೂರ್ಣಗೊಂಡಿದ್ದು ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಫಾರ್ಮಾ ಕಂಪನಿ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ.
Advertisement
ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಹಾಗೂ ಬೆಲೆ ತಗ್ಗಿಸಲು ದೇಶಿಯ ಕಂಪನಿಗಳೊಂದಿಗೆ ಲಸಿಕೆ ಉತ್ಪಾದನೆಗಾಗಿ ರಷಿಯನ್ ಡೈರೆಕ್ಟ್ ಇನ್ವೆಸ್ಟ್‍ಮೆಂಟ್ ಫಂಡ್(ಆರ್‌ಡಿಐಎಫ್) 6 ಭಾರತೀಯ ಫಾರ್ಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಯಚೂರಿನ ಶಿಲ್ಪಾ ಮೆಡಿಕೇರ್ ಲಿ, ಹೆಟೆರೋ ಡ್ರಗ್ಸ್, ವರ್ಚೊ ಲ್ಯಾಬೋರೇಟರಿಸ್, ಪನಾಸಿಯಾ ಬಯೋಟೆಕ್, ಗ್ಲ್ಯಾಂಡ್ ಫಾರ್ಮಾ ಮತ್ತು ಸ್ಟೆಲ್ಲಿಸ್ ಬಯೋಫಾರ್ಮಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
Advertisement
Advertisement
ಶಿಲ್ಪಾ ಮೆಡಿಕೇರ್ ಲಿಮಿಟೆಡ್ ತನ್ನ ಧಾರವಾಡದ ಯುನಿಟ್‍ನಲ್ಲಿ ಲಸಿಕೆ ಉತ್ಪಾದನೆಗೆ ತಯಾರಿ ನಡೆಸಿದೆ. ಧಾರವಾಡದ ಯುನಿಟ್ ವರ್ಷಕ್ಕೆ 100 ರಿಂದ 200 ಮಿಲಿಯನ್ ಡೋಸ್ ಲಸಿಕೆ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು. 100 ಮಿಲಿಯನ್ ಡೋಸ್ ತಯಾರಿಕೆ ಗುರಿಯಿಟ್ಟುಕೊಳ್ಳಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮೊದಲ ಡೋಸ್ ಲಸಿಕೆ ತಯಾರಾಗಲಿದೆ ಅಂತ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ್ ಬತೋಡ ತಿಳಿಸಿದ್ದಾರೆ.
Advertisement
ಈಗಾಗಲೇ ರಷ್ಯಾದಿಂದ ಭಾರತಕ್ಕೆ ಎರಡು ಬ್ಯಾಚ್ ಸ್ಪುಟ್ನಿಕ್ ವಿ ಲಸಿಕೆ ಬಂದಿದೆ. ಮೇ 1 ರಂದು 1.5 ಲಕ್ಷ ಡೋಸ್ ಮೊದಲ ಬ್ಯಾಚ್, ಮೇ 14 ರಂದು 60 ಸಾವಿರ ಡೋಸ್ ಎರಡನೇ ಬ್ಯಾಚ್ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಬಂದಿದ್ದು, ಹೈದರಾಬಾದ್‍ನ ಡಾ.ರೆಡ್ಡಿಸ್ ಲ್ಯಾಬ್ ಲಸಿಕೆ ಪಡೆದುಕೊಂಡಿದೆ. ಒಂದು ಡೋಸ್‍ನ ಬೆಲೆ 995 ರೂ ಇದ್ದು, ಜನ ಸಾಮಾನ್ಯರಿಗೆ ದುಬಾರಿಯಾಗಲಿದೆ. ಹೀಗಾಗಿ ಆರ್‌ಡಿಐಎಫ್ ಜೊತೆ ಒಪ್ಪಂದ ಮಾಡಿಕೊಂಡಿರುವ ರೆಡ್ಡಿಸ್ ಲ್ಯಾಬ್ ಸ್ಥಳೀಯವಾಗಿ ಉತ್ಪಾದನೆಗೆ ಒತ್ತುನೀಡಿದ್ದು. ದೇಶಿಯ 6 ಕಂಪನಿಗಳಿಗೆ ಲಸಿಕೆ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿದೆ.
ಶೇಕಡಾ 15 ರಷ್ಟು ಪ್ರಮಾಣದ ಲಸಿಕೆಯನ್ನು ರಷ್ಯಾದಿಂದ ಆಮದು ಮಾಡಿಕೊಂಡು, ಉಳಿದ ಬೇಡಿಕೆಯನ್ನು ಪೂರೈಸಲು ದೇಶಿಯ ಕಂಪನಿಗಳಲ್ಲೇ ಲಸಿಕೆ ತಯಾರಿಸಲು ಯೋಜಿಸಲಾಗಿದೆ. ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಸುಸಜ್ಜಿತ ಲಸಿಕೆ ತಯಾರಿಕೆ ಘಟಕವನ್ನು ಧಾರವಾಡದಲ್ಲಿ ಹೊಂದಿದ್ದು ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ.