ರಾಯಚೂರು ಎಪಿಎಂಸಿಗೆ ಆಂಧ್ರ, ತೆಲಂಗಾಣ ರೈತರ ಲಗ್ಗೆ- ಜಿಲ್ಲೆಯಲ್ಲಿ ಕೊರೊನಾ ಆತಂಕ

Public TV
2 Min Read
RCR APMC

ರಾಯಚೂರು: ದೇಶಾದ್ಯಂತ ಕೊರೊನಾ ಮೂರನೇ ಅಲೆಯ ಭೀತಿ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಂಧ್ರ, ತೆಲಂಗಾಣ ಭಾಗದ ರೈತರು ನಿತ್ಯ ಭತ್ತ ವ್ಯಾಪಾರಕ್ಕೆ ಬರುತ್ತಿದ್ದಾರೆ. ಮಹಾರಾಷ್ಟ್ರ ಗಡಿಜಿಲ್ಲೆಗಳ ರೈತರು ಸಹ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿರುವುದರಿಂದ ಜಿಲ್ಲೆಗೆ ಹೊಸ ಆತಂಕ ಶುರುವಾಗಿದೆ.

RCR APMC 5 medium

ಕೊರೊನಾ ಮೂರನೇ ಅಲೆ, ಡೆಲ್ಟಾ ಪ್ಲಸ್ ಭಯ ಜನರನ್ನ ಹೈರಾಣಾಗಿಸಿದೆ. ಹೀಗಾಗಿಯೇ ರಾಜ್ಯ ಸರ್ಕಾರ ಹೊರ ರಾಜ್ಯದಿಂದ ಬರುವ ಜನರ ಮೇಲೆ ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ರಾಯಚೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶ, ತೆಲಂಗಾಣ ಗಡಿ ಭಾಗದಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ. ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಕಲಬುರಗಿ, ಯಾದಗಿರಿಗಳಿಂದಲೂ ಜಿಲ್ಲೆಗೆ ರೈತರು ಭತ್ತ, ಶೇಂಗಾ, ತೊಗರಿ, ಕಡಲೆಕಾಳು ವ್ಯಾಪಾರಕ್ಕೆ ನಿತ್ಯ ಬರುತ್ತಿದ್ದಾರೆ.

RCR APMC 1 medium

ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗದ ರೈತರು ಭತ್ತ ತೆಗೆದುಕೊಂಡು ರಾಜಾರೋಷವಾಗಿ ನಗರದ ಎಪಿಎಂಸಿಗೆ ನಿತ್ಯ ಬರುತ್ತಿದ್ದಾರೆ. ಮಹಾರಾಷ್ಟ್ರ ಗಡಿ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ರೈತರನ್ನ ಕನಿಷ್ಠ ತಪಾಸಣೆಗೆ ಒಳಪಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಹೊರ ರಾಜ್ಯಗಳ ರೈತರು ಮಾತ್ರ, ಮೊದಲಿನಿಂದಲೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭತ್ತ ಮಾರುತ್ತಿದ್ದೇವೆ ಈಗಲೂ ಇಲ್ಲೇ ಮಾರುತ್ತೇವೆ ಎನ್ನುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಜನ ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲದಿರುವುದು ಇಲ್ಲಿನ ರೈತರು, ವ್ಯಾಪಾರಿಗಳಲ್ಲಿ ಹೆಚ್ಚಿನ ಆತಂಕ ಉಂಟುಮಾಡಿದೆ.

RCR APMC 3 medium

ಕಳೆದ 72 ಗಂಟೆಯಲ್ಲಿ ಟೆಸ್ಟ್ ಮಾಡಿಸಿದ ಆರ್‍ಟಿಪಿಸಿಆರ್ ನೆಗೆಟಿವ್ ವರದಿ, ಮೊದಲನೇ ಡೋಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಬೇಕು. ಅಷ್ಟೇ ಅಲ್ಲದೇ ಗಡಿ ಪ್ರದೇಶದಲ್ಲಿ ತಪಾಸಣೆ ಮಾಡಿಯೇ ರಾಜ್ಯಕ್ಕೆ ಎಂಟ್ರಿ ಮಾಡಬೇಕು ಎಂಬ ನಿಯಮಗಳು ಇಲ್ಲಿ ಪಾಲನೆಯಾಗುತ್ತಿಲ್ಲ. ಎಪಿಎಂಸಿಯಲ್ಲಿ ಶೇ.50ರಷ್ಟು ರೈತರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯದವರೇ ಇರುತ್ತಾರೆ. ಎಪಿಎಂಸಿಯಲ್ಲೂ ಅಧಿಕಾರಿಗಳು ಯಾವುದೇ ವಿಶೇಷ ತಪಾಸಣೆಗೆ ವ್ಯವಸ್ಥೆ ಮಾಡಿಲ್ಲ.

RCR APMC 2 medium

ಗಡಿಯಲ್ಲಿ ಚೆಕ್ ಪೋಸ್ಟ್ ಮಾಡಿದರೂ ಉಪಯೋಗವಿಲ್ಲ ಎನ್ನುವಂತಾಗಿದೆ. ರೈತರು ವಾಹನಗಳ ಮೂಲಕ ಭತ್ತ ತುಂಬಿಕೊಂಡು ಜಿಲ್ಲೆಗೆ ನೇರವಾಗಿ ಪ್ರವೇಶ ಮಾಡುತ್ತಿದ್ದರೂ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲ. ಜಿಲ್ಲಾಡಳಿತ ಕೇವಲ ತಪಾಸಣೆ ಬಗ್ಗೆ ಆದೇಶ ಹೊರಡಿಸಿ ಸುಮ್ಮನಾಗಿದೆ.

Share This Article
Leave a Comment

Leave a Reply

Your email address will not be published. Required fields are marked *