-ಮಚ್ಚು ಲಾಂಗ್‍ಗಳಿಂದ ಕೊಚ್ಚಿ ಕೊಲೆ
ರಾಯಚೂರು: ನಗರದ ಜಾಕೀರ್ ಹುಸೇನ್ ವೃತ್ತದ ಬಳಿ ನಡುರಸ್ತೆಯಲ್ಲೇ ನಗರಸಭೆ ಸದಸ್ಯನೊಬ್ಬನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ. 42 ವರ್ಷದ ಮಕ್ಬೂಲ್ ಕೊಲೆಯಾದ ನಗರಸಭೆ ಜೆಡಿಎಸ್ ಸದಸ್ಯ.
ರಾಯಚೂರು ನಗರಸಭೆ ವಾರ್ಡ ಸಂಖ್ಯೆ 8ರ ಸದಸ್ಯ ಮಕ್ಬೂಲ್ ಅವರನ್ನ ಐದು ಜನ ಮಚ್ಚು ಲಾಂಗ್ ಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ ಹಾಗೂ ಕೊಲೆಗಾರರ ಸುಳಿವೂ ಸಹ ಪತ್ತೆಯಾಗಿಲ್ಲ. ಸದರ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸಿಕ್ಕಂ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಮಕ್ಬೂಲ್ ಅವರನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ ಆರೇಳು ತಿಂಗಳ ಹಿಂದೆ ಮಕ್ಬೂಲ್ ಸಹೋದರ ಸಹ ಕೊಲೆಯಾಗಿದ್ದ. ಹೀಗಾಗಿ ಹಳೆಯ ವೈಷಮ್ಯದ ಕಾರಣಕ್ಕೆ ಕೊಲೆ ನಡೆದಿರಬಹುದು ಎನ್ನಲಾಗಿದೆ.