– ಹಳ್ಳಿಯ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಕೊಳ್ಳುತ್ತಿರುವ ಸೋಂಕು
ರಾಯಚೂರು : ಜಿಲ್ಲೆಯ ಹಳ್ಳಿ ಹಳ್ಳಿಯಲ್ಲೂ ಕೊರೊನಾ ರಣಕೇಕೆ ಹಾಕುತ್ತಿದೆ. ಮಕ್ಕಳಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಅಧಿಕಾರಿಗಳು ಹಳ್ಳಿಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ರಾಯಚೂರು ತಾಲೂಕಿನ ಸಿಂಗನೋಡಿ ತಾಂಡಾದಲ್ಲಿ ನಿನ್ನೆ 130 ಜನರಿಗೆ ತಪಾಸಣೆ ಮಾಡಲಾಗಿದ್ದು 21 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ 11 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮಕ್ಕಳನ್ನ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲು ಗ್ರಾಮಸ್ಥರು ತಕರಾರು ಮಾಡಿದ್ದರಿಂದ 10 ಜನರನ್ನ ಮಾತ್ರ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಮಕ್ಕಳನ್ನು ಹೋಂ ಐಸೋಲೇಷನ್‍ಗೆ ಬಿಟ್ಟು ಹೋಗಿದ್ದಾರೆ. ತಾಂಡಾದಲ್ಲಿನ 250ಕ್ಕೂ ಹೆಚ್ಚು ಮಕ್ಕಳಿಗೂ ಕೊರೊನಾ ಆತಂಕವಿದೆ. ಕೊರೊನಾ ಪರೀಕ್ಷೆಗೆ ಆತಂಕ ವ್ಯಕ್ತಪಡಿಸುತ್ತಿರುವ ಸಿಂಗನೋಡಿ ತಾಂಡಾದ ಜನ ಅಧಿಕಾರಿಗಳಿಗೆ ಸಹಕರಿಸುತ್ತಿಲ್ಲ. ಇದನ್ನೂ ಓದಿ: ರಾಯಚೂರಿನಲ್ಲಿ ಮದುವೆಗೆ ಸಂಪೂರ್ಣ ನಿರ್ಬಂಧ: ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ
ಕೊರೊನಾ ತಪಾಸಣೆಗೆ ಅಡ್ಡಿಪಡಿಸುತ್ತಿರುವ ಗ್ರಾಮಸ್ಥರು, ಪರೀಕ್ಷೆ ಮಾಡಿದರೆ ನಮ್ಮ ಗ್ರಾಮದ ಶಾಲೆಯಲ್ಲೇ ಕೋವಿಡ್ ಕೇರ್ ಸೆಂಟರ್ ತೆರೆಯಲು ಒತ್ತಾಯಿಸಿದ್ದಾರೆ. 12 ವರ್ಷದ ಒಳಗಿನ 11 ಜನ ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಗ್ರಾಮದಲ್ಲಿ ಆತಂಕ ಹೆಚ್ಚಿಸಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಎಷ್ಟೇ ಮನವೊಲಿಸಿದರೂ ಕೊರೊನಾ ಪರೀಕ್ಷೆಗೆ ಜನ ಮುಂದಾಗುತ್ತಿಲ್ಲ. ಹೀಗಾಗಿ ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ರಾಯಚೂರು ಜಿಲ್ಲಾಡಳಿತ ನಾನಾ ಕಸರತ್ತು ಮಾಡುತ್ತಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಸಂಚಾರಿ ಕೋವಿಡ್ ಚಿಕಿತ್ಸಾ ಆಸ್ಪತ್ರ್ರೆ ಆರಂಭ