ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಿಂದ ಓರ್ವನ ಸ್ಥಿತಿ ಗಂಭೀರವಾಗಿದೆ.
38 ವರ್ಷದ ನಾಗಪ್ಪ, 12 ವರ್ಷದ ವೆಂಕಟೇಶ್ ಸಿಡಿಲಿಗೆ ಬಲಿಯಾದ ದುರ್ದೈವಿಗಳು. ಸ್ಥಳದಲ್ಲಿದ್ದ ಒಂದು ಕುರಿ ಸಹ ಸಾವನ್ನಪ್ಪಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.
ನಾಗಪ್ಪನ ಜಮೀನಿಗೆ ತಾಯಿ ಜೊತೆ ಕೂಲಿ ಕೆಲಸಕ್ಕೆ ಬಂದಿದ್ದ ಬಾಲಕ ವೆಂಕಟೇಶ್ ಸಾವನ್ನಪ್ಪಿದ್ದಾನೆ. ಮಳೆ ಹಿನ್ನೆಲೆ ಮರದ ಕೆಳಗೆ ನಿಂತಿದ್ದವರಿಗೆ ಸಿಡಿಲು ಬಡಿದಿದೆ. ಘಟನೆಯಲ್ಲಿ ಇನ್ನೊರ್ವನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಇನ್ನೂ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.