ರಾಯಚೂರು: ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗದೆ, ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರ ಮತ್ತು ತುರ್ತು ಆಮ್ಲಜನಕ ಸಹಾಯ ಘಟಕದ ವ್ಯವಸ್ಥೆಯನ್ನ ಸಾರಿಗೆ ಬಸ್‍ಗಳಲ್ಲಿ ಮಾಡಲಾಗುತ್ತಿದೆ.
ಎನ್.ಈ.ಕೆ.ಎಸ್.ಆರ್. ಟಿ.ಸಿಯ ಮೂರು ಬಸ್‍ಗಳನ್ನ ಸಂಚಾರಿ ಚಿಕಿತ್ಸಾ ಕೇಂದ್ರಕ್ಕೆ ಜಿಲ್ಲಾಡಳಿತ ಬಳಸಿಕೊಳ್ಳುತ್ತಿದೆ. ಬಸ್‍ನಲ್ಲಿ 4 ಬೆಡ್ ಹಾಗೂ ಸೋಂಕಿತರು ಕುಳಿತುಕೊಂಡು ಆಕ್ಸಿಜನ್ ಪಡೆಯಲು 4 ಸೀಟ್ ವ್ಯವಸ್ಥೆ ಮಾಡಲಾಗಿದೆ. ಬಸ್‍ನಲ್ಲಿ 5 ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆಯಿದೆ. ಈ ಮೂರು ಬಸ್‍ಗಳನ್ನ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕಾಸ್ಪತ್ರೆ ಮುಂದೆ ನಿಲ್ಲಿಸಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಸಿಗದವರು, ಉಸಿರಾಟ ತೊಂದರೆ ಉಂಟಾದವರಿಗೆ ಬಸ್ ನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಆಸ್ಪತ್ರೆಗೆ ದಾಖಲಾಗಿ ಐದಾರು ಗಂಟೆಯಲ್ಲಿ ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ತಾಲೂಕು, ಗ್ರಾಮೀಣ ಭಾಗದಿಂದ ಬರುವ ರೋಗಿಗಳಿಗೆ ಕೂಡಲೇ ಚಿಕಿತ್ಸೆ ಸಿಗಬೇಕಾದ ಅಗತ್ಯವಿದೆ. ಹೀಗಾಗಿ ಮೊಬೈಲ್ ಕೋವಿಡ್ ಆಸ್ಪತ್ರೆಗಳನ್ನ ತೆರೆಯಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಬಸ್‍ಗಳು ಸಿಗಲಿವೆ ಅಂತ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಹೇಳಿದ್ದಾರೆ.