ರಾಯಚೂರು : ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ಎರಡು ಮನೆಗಳು ಕುಸಿದು ಮನೆಯ ವಸ್ತುಗಳೆಲ್ಲಾ ಸಂಪೂರ್ಣ ಹಾನಿಯಾಗಿವೆ.
ರಾಯಚೂರು ತಾಲೂಕಿನ ಗೋನವಾರ ಗ್ರಾಮದ ಗುಡೆಪ್ಪ ಎಂಬವರಿಗೆ ಸೇರಿದ ಎರಡು ಮನೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ 15 ಚೀಲ ಅಕ್ಕಿ, 2 ಚೀಲ ಬೇಳೆ ಸೇರಿ ಮನೆಯಲ್ಲಿನ ವಸ್ತುಗಳೆಲ್ಲಾ ಹಾಳಾಗಿವೆ. ಮನೆ ಬೀಳುವ ಮುನ್ಸೂಚನೆಯಿಂದ ಹೊರಬಂದಿದ್ದರಿಂದ ಕುಟುಂಬಸ್ಥರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರು ತಹಶೀಲ್ದಾರ್ ಹಂಪಣ್ಣ ಗೋನವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದ ಬಿದ್ದಿರುವ ಮನೆಗಳಿಗೆ ಸರ್ಕಾರ ನಿಯಮಾನುಸಾರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಇನ್ನೂ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಮುಂದುವರಿದಿದ್ದು, ತಣ್ಣನೆಯ ಗಾಳಿಯಿಂದಾಗಿ ಬಿಸಿಲುನಾಡು ಮಲೆನಾಡಾಗಿ ಬದಲಾಗಿದೆ. ಸತತವಾಗಿ ಮಳೆ ಬರುತ್ತಿದ್ದರಿಂದ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ತುಂತುರು ಮಳೆಯಲ್ಲೇ ತರಕಾರಿ, ಹಣ್ಣಿನ ವ್ಯಾಪಾರ ನಡೆದಿದೆ.
ಮಧ್ಯಾಹ್ನವಾದ್ರೂ ರಾಯಚೂರಿನಲ್ಲಿ ಸೂರ್ಯ ಉದಯಿಸಿಲ್ಲ. ಹೀಗಾಗಿ ವ್ಯಾಪಾರ ವಹಿವಾಟುಗಳು ನಿಧಾನಕ್ಕೆ ಆರಂಭವಾಗುತ್ತಿವೆ. ಇನ್ನೂ ಕಟಾವಿಗೆ ಬಂದಿದ್ದ ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗುವ ಭೀತಿ ರೈತರನ್ನ ಕಾಡುತ್ತಿದೆ.