– 233ಕ್ಕೇರಿದ ಕೊರೊನಾ ಪಾಸಿಟಿವ್ ಪ್ರಕರಣ
ರಾಯಚೂರು: ಪೊಲೀಸ್ ಕಾನ್‍ಸ್ಟೇಬಲ್ ಹಾಗೂ ನಾಲ್ಕು ಮಕ್ಕಳು ಸೇರಿದಂತೆ ರಾಯಚೂರಿನಲ್ಲಿ 16 ಜನರಿಗೆ ಇಂದು ಕೊರೋನಾ ವೈರಸ್ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ನಂಟು ಇಂದು ಸಹ ಜಿಲ್ಲೆಯ ದೇವದುರ್ಗ ತಾಲೂಕನ್ನು ತಲ್ಲಣಗೊಳಿಸಿದೆ. ಸೋಂಕಿತರೆಲ್ಲರೂ ದೇವದುರ್ಗ ತಾಲೂಕಿನವರೇ ಆಗಿದ್ದಾರೆ.
ಜಾಲಹಳ್ಳಿ ಕ್ವಾರಂಟೈನ್ ಕೇಂದ್ರದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವದುರ್ಗ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಪೊಲೀಸ್ ಠಾಣೆಯನ್ನ ಡಿಸ್ ಇನ್ಫೆಕ್ಷನ್ ಮಾಡಿ ಸೀಲ್ ಮಾಡಲಾಗಿದೆ. ಠಾಣೆಯ ಪಕ್ಕದಲ್ಲಿನ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಠಾಣೆ ತೆರೆಯಲಾಗಿದ್ದು ದೂರುಗಳನ್ನ ಅಲ್ಲಿಯೇ ಸ್ವೀಕರಿಸಲಾಗುತ್ತದೆ.
ಸೋಂಕಿತನ ಪ್ರಥಮ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ಉಳಿದವರೆಲ್ಲ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಇಂದಿನ ಸೋಂಕಿತರಲ್ಲಿ ಒಂದು ವರ್ಷದ ಮಗು ಸಹ ಇದೆ. ಇದೂವರೆಗೆ ವರದಿಯಾಗಿರುವ 233 ಪ್ರಕರಣಗಳಲ್ಲಿ 203 ಜನ ದೇವದುರ್ಗದವರೇ ಆಗಿದ್ದಾರೆ. ರಾಯಚೂರಿನಲ್ಲಿ 23 ಹಾಗೂ ಲಿಂಗಸುಗೂರಿನಲ್ಲಿ 6, ಮಸ್ಕಿಯಲ್ಲಿ 1 ಪ್ರಕರಣ ವರದಿಯಾಗಿದ್ದು, 1653 ವರದಿಗಳು ಬರುವುದು ಬಾಕಿಯಿದೆ.