ರಾಯಚೂರು: ಜಿಲ್ಲೆಯಾದ್ಯಂತ ನಿನ್ನೆಯಿಂದ ಭರ್ಜರಿ ಮಳೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಯಚೂರು ಜನರ ಜೀವನ ಅಸ್ತವ್ಯಸ್ತವಾಗಿದೆ.
ಬುಧವಾರ ದಿನಪೂರ್ತಿ ಸುರಿದ ಮಳೆಗೆ ರಾಯಚೂರಿನ ರಸ್ತೆಗಳು ಹಾಳಾಗಿವೆ. ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲ ರಸ್ತೆಗಳಲ್ಲಿ ನೀರು ನಿಂತಿವೆ. ರಸ್ತೆಗಳಲ್ಲಿಯ ಗುಂಡಿಗಳಿಂದಾಗಿ ರಸ್ತೆಗಳು ಹೊಂಡಗಳಾಗಿವೆ. ಮಳೆಯಿಂದಾಗಿ ಚರಂಡಿ ನೀರು ಸಹ ರಸ್ತೆಯ ಮೇಲೆ ಹರಿದಿವೆ. ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ. ಕೊರೊನಾದಿಂದ ತತ್ತರಿಸುತ್ತಿರುವಾಗ ಮಳೆಯಿಂದಾಗಿ ಮತ್ತೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿರುವ ಜನ ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ರಾಯಚೂರು ನಗರದ ಮಕ್ತಲಪೇಟೆಯ ಆಂಜನಮ್ಮ ಹಾಗೂ ಯಂಕಮ್ಮ ಎಂಬುವರಿಗೆ ಸೇರಿದ ಎರಡು ಮನೆಗಳು ಕುಸಿತಗೊಂಡಿದ್ದು, ಇನ್ನೂ ಅಧಿಕ ಮನೆಗಳ ಗೋಡೆಗಳು ನೀರಿನಿಂದಾಗಿ ನೆನೆದು ಬೀಳುವ ಹಂತಕ್ಕೆ ಬಂದಿವೆ. ನಿನ್ನೆ ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆ ಇಂದು ಬೆಳಿಗ್ಗೆವರೆಗೂ ನಿಂತಿಲ್ಲ. ಈಗಲೂ ರಾಯಚೂರಿನಲ್ಲಿ ಜಿಟಿಜಿಟಿ ಮಳೆ ಬರುತ್ತಿದೆ. ಇದರಿಂದ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಮನೆ ಕುಸಿತದಿಂದ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ ಆದರೆ ಇಂತಹ ಆರ್ಥಿಕ ಸಂಕಷ್ಟದ ನಡುವೆ ಮನೆ ಕುಸಿತದಿಂದ ಜನರು ಕಂಗಾಲಾಗಿದ್ದಾರೆ.
ಬುಧವಾರದಿಂದ ಸುರಿದ ಭಾರಿ ಮಳೆ ಹಿನ್ನೆಲೆ ಶಕ್ತಿನಗರದಿಂದ ಕರೇಕಲ್ ಕಾಡ್ಲೂರು, ಗುರ್ಜಾಪುರಿಗೆ ಹೋಗುವ ಮಾರ್ಗ ಕಡಿತವಾಗಿದೆ. ರೈಲ್ವೆ ಮೇಲ್ಸೆತುವೆ ಕೆಳಗೆ ಎರಡುವರೆ ಅಡಿಯವರೆಗೂ ನೀರು ನಿಂತು ವಾಹನಗಳ ಓಡಾಟಕ್ಕೆ ಅಡ್ಡಿಯಾಗಿದೆ. ರಸ್ತೆ ಸಂಪರ್ಕ ಕಡಿತವಾದರೂ ಕೆಲವರು ನೀರಲ್ಲೇ ಹೋಗುವ ಪ್ರಯತ್ನ ನಡೆಸಿದ್ದಾರೆ. ಇಂದು ಸಹ ಮೋಡಕವಿದ ವಾತಾವರಣ ಮುಂದುವರೆದಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಮಳೆ ಆರ್ಭಟ ಹೀಗೆ ಮುಂದುವರಿದರೆ ಹೊಲಗದ್ದೆಗಳಲ್ಲಿ ನೀರು ನಿಂತು ಬಿತ್ತಿದ ಬೆಳೆಗಳಿಗೆ ಹಾನಿಯಾಗುವ ಸಂಭವವಿರುವುದರಿಂದ ರೈತರು ಆತಂಕದಲ್ಲಿದ್ದಾರೆ.