– ಜಮ್ಮು ಕಾಶ್ಮೀರ, ಅಯೋಧ್ಯೆಯಲ್ಲಿ ದಾಳಿಗೆ ಪ್ಲಾನ್
– 370ನೇ ವಿಧಿ ರದ್ದತಿಗೆ ವರ್ಷ ತುಂಬುವ ಹಿನ್ನೆಲೆ ದಾಳಿಗೆ ಸಂಚು
ನವದೆಹಲಿ: ಜಮ್ಮು ಕಾಶ್ಮೀರ ಹಾಗೂ ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸದ ವೇಳೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ.
ಆಗಸ್ಟ್ 5 ರಂದು ಜಮ್ಮು ಕಾಶ್ಮೀರ ಹಾಗೂ ರಾಮ ಮಂದಿರ ಶಿಲಾನ್ಯಾಸ ನಡೆಯುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ದಳ ತಿಳಿಸಿದೆ. ಅಲ್ಲದೆ ಅಂದು 370ನೇ ವಿಧಿ ರದ್ದು ಪಡಿಸಿ ಒಂದು ವರ್ಷವಾಗಲಿದೆ. ಹೀಗಾಗಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ವಾರಗಳ ಹಿಂದೆ ಗುಪ್ತಚರ ದಳಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಆಕಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ.
Advertisement
Advertisement
ಹಲವು ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಸ್ಪೆಷಲ್ ಸರ್ವೀಸ್ ಗ್ರೂಪ್ ಅಫ್ಘಾನಿಸ್ಥಾನದ ಜಲಾಲಾಬಾದ್‍ನಲ್ಲಿ ತರಬೇತಿ ನೀಡುತ್ತಿದ್ದು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದು ಪಡಿಸಿ ವರ್ಷ ತುಂಬುತ್ತಿರುವ ಹಿನ್ನೆಲೆ ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಗುಪ್ತಚರ ದಳ ವಿವರವಾದ ಮಾಹಿತಿ ನೀಡಿದ ಬಳಿಕ ಅಯೋಧ್ಯೆ, ದೆಹಲಿ ಹಾಗೂ ಜಮ್ಮು ಕಾಶ್ಮೀರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
Advertisement
Advertisement
ಜಮ್ಮು ಕಾಶ್ಮೀರದಲ್ಲಿ ದಾಳಿ ನಡೆಸಲು ಜಾಲಾಬಾದ್‍ನಲ್ಲಿ ಸುಮಾರು 20 ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಎಸ್‍ಎಸ್‍ಜಿ ಸೇನೆ ತರಬೇತಿ ನೀಡಿದೆ. ಮೇ 26 ಹಾಗೂ ಮೇ 29ರ ಮಧ್ಯೆ ದಾಳಿ ನಡೆಸುವ ಸಾಧ್ಯತೆ ಇತ್ತು. ಆದರೆ ಭದ್ರತಾ ಸಿಬ್ಬಂದಿ ಹೆಚ್ಚು ಎಚ್ಚರಿಕೆ ವಹಿಸಿದ್ದರಿಂದ ದಾಳಿ ನಡೆಸಲು ಸಾಧ್ಯವಾಗಿಲ್ಲ ಎಂದು ಗುಪ್ತಚರ ದಳ ತಿಳಿಸಿದೆ.
ಪಾಕಿಸ್ತಾನ ಸೇನೆ 20-25 ಉಗ್ರರನ್ನು ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮೂಲಕ ಹಾಗೂ ಇನ್ನೂ ಐದಾರು ಜನರನ್ನು ಭಾರತ-ನೇಪಾಳ ಗಡಿಯಿಂದ ಒಳ ನುಸುಳಲು ಸಹಾಯ ಮಾಡುತ್ತಿದೆ. ಹೀಗಾಗಿ ಎಲ್ಲ ಏಜೆನ್ಸಿಗಳನ್ನು ಹಾಗೂ ಪೊಲೀಸರನ್ನು ಎಸ್‍ಒಪಿಯಂತೆ ಎಚ್ಚರದಿಂದಿರಲು ಸೂಚಿಸಲಾಗಿದೆ.
ಆಗಸ್ಟ್ 5ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ. ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕೇಂದ್ರ ಸಚಿವೆ ಉಮಾ ಭಾರತಿ ಹಾಗೂ ಆರ್‍ಎಸ್‍ಎಸ್‍ನ ಹಲವು ಗಣ್ಯರು ಭಾಗಿಯಾಗುವ ನಿರೀಕ್ಷೆ ಇದೆ.