ಲಕ್ನೋ: ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರಾಗಿರುವ ಚಂಪತ್ ರಾಯ್ ವಿರುದ್ಧ ಭೂ ಅಕ್ರಮ ಆರೋಪ ಹೊರಿಸಿದ ಪತ್ರಕರ್ತ ಮತ್ತು ಇಬ್ಬರ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಪತ್ರಕರ್ತ ವಿನೀತ್ ನರೈನ್, ಅಲ್ಕಾ ಲಾಹೋತಿ, ರಜನೀಶ್ ಅವರ ವಿರುದ್ಧ ಚಂಪತ್ ರಾಯ್ ಅವರ ಸಹೋದರ ಸಂಜಯ್ ಬನ್ಸಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ವಿಶ್ವ ಹಿಂದೂ ಪರಿಷತ್ ಮುಖಂಡರಾಗಿರುವ ಚಂಪತ್ ರಾಯ್ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ನಲ್ಲಿ ಕಾರ್ಯದರ್ಶಿಯಾಗಿದ್ದು ಇವರು ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವಿನೀತ್ ನರೈನ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಇದನ್ನೂ ಓದಿ: ರಾಮ ಮಂದಿರ ಜಮೀನು ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ- ಎಸ್‍ಪಿ, ಆಪ್ ಆರೋಪ
ಈ ಮೂವರೂ ವಿಎಚ್‍ಪಿ ನಾಯಕನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಸಂಚು ರೂಪಿಸಿ ದೇಶಾದ್ಯಂತ ಇರುವ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೂರು ದಿನಗಳ ಹಿಂದೆ ಫೇಸ್‍ಬುಕ್ ನಲ್ಲಿ ವಿನೀತ್ ನರೈನ್, ಚಂಪತ್ ರಾಯ್ ಅವರ ಸಹೋದರರು ಬಿಜ್ನೋರ್ ನಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಪ್ರಕಟಿಸಿದ್ದರು.
ನರೈನ್ ಮತ್ತು ಇತರರು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ, ಉದ್ದೇಶಪೂರ್ವಕ ಸುಳ್ಳು ವರದಿ ಇತ್ಯಾದಿ ಆರೋಪಗಳನ್ನು ಎಫ್‍ಐಆರ್ ನಲ್ಲಿ ಹೊರಿಸಲಾಗಿದೆ.
ಬಿಜ್ನೋರ್ ಪೊಲೀಸ್ ಮುಖ್ಯಸ್ಥರು ಈಗಾಗಲೇ ಚಂಪತ್ ರಾಯ್ ಮತ್ತು ಅವರ ಸಹೋದರರಿಗೆ ಈ ಆರೋಪಕ್ಕೆ ಸಂಬಂಧಿಸಿದಂತೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕ್ಲೀನ್ ಚಿಟ್ ನೀಡಿದ್ದು ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.